ಬೆಂಗಳೂರು:''ರಾಹುಲ್ ಗಾಂಧಿ ಅವರ ಜನಪ್ರಿಯತೆ ಹಾಗೂ ನಾಯಕತ್ವಕ್ಕೆ ಹೆದರಿ ಅವರನ್ನು, ರಾವಣನಂತೆ ಬಿಜೆಪಿಯವರು ಬಿಂಬಿಸಿದ್ದಾರೆ. ಬಿಜೆಪಿಗೆ ರಾಮ- ರಾವಣ ನಡುವಿನ ಯುದ್ಧದ ಪುರಾಣ ಸಂಪೂರ್ಣವಾಗಿ ತಿಳಿದಿಲ್ಲ. ಅದಕ್ಕೆ ಅವರು ಈ ರೀತಿ ಮಾಡುತ್ತಿದ್ದಾರೆ'' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನಸೌಧದ ಬಳಿ ಇಂದು (ಶನಿವಾರ) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಅವರನ್ನು ರಾವಣನನ್ನಾಗಿ ಬಿಂಬಿಸಿ ತಿರುಚಿರುವ ಬಿಜೆಪಿ ಪೋಸ್ಟರ್ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, "ಉತ್ತರ ಭಾರತದಲ್ಲಿ ರಾವಣನನ್ನು ಕೂಡ ಪೂಜಿಸುವ ಪದ್ಧತಿ ಇದೆ. ನಮ್ಮ ಸಂಸ್ಕೃತಿಯನ್ನು ಸರಿಯಾಗಿ ತಿಳಿದುಕೊಂಡಿದ್ದರೆ, ಈ ಮಟ್ಟಕ್ಕೆ ಬಿಜೆಪಿಯವರು ಇಳಿಯುತ್ತಿರಲಿಲ್ಲ. ಭಾರತ್ ಜೋಡೋ ಯಾತ್ರೆಯ ನಂತರ ಇಂಡಿಯಾ ಮೈತ್ರಿಕೂಟ ಪ್ರಾರಂಭವಾಯಿತು'' ಎಂದು ತಿಳಿಸಿದರು.
''ಇಂಡಿಯಾ ಮೈತ್ರಿಕೂಟ ಬಲಿಷ್ಠವಾಗಿ ರೂಪುಗೊಳ್ಳುತ್ತಿದೆ. ಇಂಡಿಯಾ ಒಂದಾಗುತ್ತಿದೆ. ಇಂಡಿಯಾ ರಕ್ಷಣೆಯಾಗಲಿದೆ. ಹೀಗಾಗಿ ಬಿಜೆಪಿಯವರು ರಾಹುಲ್ ಗಾಂಧಿ ಪಾದಯಾತ್ರೆ ಹಾಗೂ ಮೈತ್ರಿಗೆ ಹೆದರಿಕೊಂಡಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರಿಗೆ ರಾವಣನ ರೀತಿ 10 ತಲೆ ಹಾಕಿದ್ದಾರೆ. ಬಿಜೆಪಿಯವರು ಪುರಾಣ ತಿಳಿದುಕೊಳ್ಳಬೇಕು. ರಾಹುಲ್ ಗಾಂಧಿ ಅವರ ಬಗ್ಗೆ ಎಷ್ಟು ಭಯಭೀತರಾಗಿದ್ದಾರೆ ಎನ್ನುವುದು 'ರಾವಣ' ಪೋಸ್ಟರ್ ನೋಡಿದರೆ ತಿಳಿಯುತ್ತದೆ” ಎಂದ ಅವರು, ''ಬಿಜೆಪಿಯ ಈ ನಡೆ ವಿರುದ್ಧ ಇಡೀ ದೇಶದಾದ್ಯಂತ ಜನರು ಬೀದಿಗಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇಲ್ಲಿಯೂ ಸಚಿವರಾದ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ'' ಎಂದರು.
ಬಾರ್ ಲೈಸೆನ್ಸ್ ವಿಚಾರ:ನೂತನ ಮದ್ಯದಂಗಡಿಗಳಿಗೆ ಅನುಮತಿ ನೀಡುವುದಿಲ್ಲ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಕೇಳಿದಾಗ, ''ಮುಖ್ಯಮಂತ್ರಿಗಳು ಹೇಳಿದ್ದಾರೆ. ಮದ್ಯದಂಗಡಿ ತೆರೆಯಲು ಅದಕ್ಕೆ ಆದ ಕಾನೂನು ಎಂಎಸ್ಐಎಲ್ ಸೇರಿದಂತೆ ಅನೇಕ ನಿಯಮಗಳಿವೆ. ಹೀಗಾಗಿ ಪ್ರತಿ ಹಳ್ಳಿ ಹಳ್ಳಿಯಲ್ಲಿ ಮದ್ಯದಂಗಡಿ ತೆರೆಯಲು ಆಗುವುದಿಲ್ಲ. ಇವುಗಳನ್ನು ಒಂದು ವ್ಯವಸ್ಥಿತ ರೂಪದಲ್ಲಿ ತರಬೇಕಿದೆ'' ಎಂದು ಡಿಕೆಶಿ ತಿಳಿಸಿದರು.