ಬೆಂಗಳೂರು :ಕಳೆದ ಕೆಲವು ತಿಂಗಳ ಹಿಂದೆ ಟೊಮೆಟೊ ಬೆಲೆ ಗಗನಕ್ಕೇರುವ ಮೂಲಕ ಗ್ರಾಹಕರನ್ನು ಕಂಗಾಲಾಗಿಸಿತ್ತು. ಇದೀಗ ಬೆಲೆ ಇಳಿದಿದೆ. ಆದರೆ, ಈರುಳ್ಳಿ ಬೆಲೆ ಹೆಚ್ಚಳದ ಆತಂಕ ಶುರುವಾಗಿದೆ. ರಾಜ್ಯದಲ್ಲಿ ಈರುಳ್ಳಿ ಬೆಳೆಯುವ ಜಿಲ್ಲೆಗಳಿಂದ ನಗರಕ್ಕೆ ಪೂರೈಕೆ ಬಹುತೇಕ ಕುಸಿದಿದೆ.
ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ ಮೂಲಕ ಮಹಾರಾಷ್ಟ್ರದ ಈರುಳ್ಳಿ ರಾಜ್ಯಕ್ಕೆ ಬರುತ್ತಿದ್ದು ಬೆಲೆ ನಿಯಂತ್ರಣದಲ್ಲಿದೆ. ಆದರೆ ಮಹಾರಾಷ್ಟ್ರದಲ್ಲಿ ಈರುಳ್ಳಿ ದರ ಏರಿಕೆಯಾಗಿ, ಪೂರೈಕೆ ಕಡಿಮೆಯಾದರೆ ರಾಜ್ಯದಲ್ಲೂ ದರ ಹೆಚ್ಚಳ ಆಗಲಿದೆ. ಕಡಿಮೆ ಬೆಳೆಯಿಂದಾಗಿ ಮತ್ತಷ್ಟು ಬೆಲೆ ಏರಿಕೆ ತಡೆಗೆ ಹಾಗೂ ಕೃತಕ ಅಭಾವ ಸೃಷ್ಟಿಗೆ ಅವಕಾಶವಾಗದಂತೆ ಕೇಂದ್ರದ ನಫೆಡ್ ಹಾಗೂ ನ್ಯಾಷನಲ್ ಕೋ ಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ ಮೂಲಕ ಏಪ್ರಿಲ್, ಮೇ ತಿಂಗಳಲ್ಲಿ ಮಹಾರಾಷ್ಟ್ರದ ಈರುಳ್ಳಿ ಖರೀದಿಸಲಾಗಿದೆ. ಅದು ಸದ್ಯ ಬೆಂಗಳೂರು ಮಾರುಕಟ್ಟೆಗೆ ಪೂರೈಕೆಯಾಗುತ್ತಿದೆ ಎಂದು ತಿಳಿದುಬಂದಿದೆ.
ಈ ವರ್ಷ ಬಿತ್ತನೆ ಪ್ರಮಾಣ ಇಳಿಮುಖವಾಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಬಂದಿಲ್ಲ. ಬೆಂಗಳೂರಿನ ಯಶವಂತಪುರ ಹೊರವಲಯದ ದಾಸನಪುರ ಎಪಿಎಂಸಿಯಲ್ಲಿ ಕ್ವಿಂಟಲ್ಗೆ 1,500 ರಿಂದ 2,500 ರೂ ಬೆಲೆಗೆ ಮಾರಾಟವಾಗುತ್ತಿದೆ. ಕಳೆದ 15 ದಿನಗಳ ಹಿಂದೆ ಚಿಲ್ಲರೆ ಮಾರುಕಟ್ಟೆಯಲ್ಲಿ ಸರಿಸುಮಾರು 20 ರೂಪಾಯಿ ಕೆ.ಜಿಗೆ ಸಿಗುತ್ತಿದ್ದ ಈರುಳ್ಳಿ ಈಗ ಸುಮಾರು 45 ರೂಪಾಯಿಗೆ ಮಾರಾಟವಾಗುತ್ತಿದೆ. ಪ್ರಮಾಣ ಕಡಿಮೆ ಇದ್ದರೂ ಕೃತಕ ಅಭಾವ ತಪ್ಪಿಸಲಾಗುತ್ತಿದೆ. ಕೇಂದ್ರ ಸರ್ಕಾರ ಈರುಳ್ಳಿ ಪೂರೈಸದಿದ್ದರೆ ಕೆ.ಜಿಗೆ 50 ರೂಪಾಯಿ ದಾಟುವ ಸಾಧ್ಯತೆ ಇತ್ತು ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಚಿತ್ರದುರ್ಗ, ಚಳ್ಳಕೆರೆ, ಚಿಕ್ಕಬಳ್ಳಾಪುರ ಸೇರಿ ದಕ್ಷಿಣದ ರಾಜ್ಯಗಳಿಂದ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದು, ಮುಂದಿನ ತಿಂಗಳಿನಲ್ಲಿ ಗದಗ, ವಿಜಯಪುರದಿಂದ ಪೂರೈಕೆಯಾಗಲಿದೆ. ಆದರೆ ಈ ವರ್ಷ ಬಿತ್ತನೆ ಕಡಿಮೆಯಾಗಿದೆ. ಬೆಂಗಳೂರಿನ ಯಶವಂತಪುರ ಎಪಿಎಂಸಿಗೆ 1.20 ಲಕ್ಷ ಚೀಲ ಈರುಳ್ಳಿ ಬರಬೇಕಿತ್ತು. ಆದರೆ 70 ಸಾವಿರ ಚೀಲಗಳು ಮಾತ್ರ ಬಂದಿದೆ. ಪೂರೈಕೆ ಕಡಿಮೆಯಿದ್ದರೂ ಸದ್ಯ ಬೆಲೆ ನಿಯಂತ್ರಣದಲ್ಲಿದೆ. ನಫೆಡ್, ಎನ್ಸಿಸಿಎಫ್ ಮೂಲಕ ಈರುಳ್ಳಿ ಪೂರೈಕೆ ಆಗುತ್ತಿರುವ ಕಾರಣ ಬೆಲೆ ಕಡಿಮೆಯಿದೆ. ಈ ವರ್ಷ ಅನಾವೃಷ್ಟಿಯಿಂದ ಈರುಳ್ಳಿ ಬೆಳೆ ಬಿತ್ತನೆ ಕಡಿಮೆಯಾಗಿದೆ. ಇದೇ ವೇಳೆ ಕಡಿಮೆ ಉತ್ಪನ್ನವಿದ್ದರೂ ಗುಣಮಟ್ಟದ ಈರುಳ್ಳಿ ಬರುತ್ತಿದೆ ಎಂದು ಬೆಂಗಳೂರು ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಬಿ. ರವಿಶಂಕರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಹೇಗಿದೆ ಈರುಳ್ಳಿ ಬೆಲೆ?:ಹುಬ್ಬಳ್ಳಿ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಸ್ಥಳೀಯ ಈರುಳ್ಳಿ ಕೆಲ ವಾರಗಳ ಹಿಂದೆ ಕೇವಲ 1,800 ರೂಪಾಯಿಗೆ ಒಂದು ಕ್ವಿಂಟಲ್ನಂತೆ ಮಾರಾಟವಾಗಿತ್ತು. ಆದರೆ ಇದೀಗ ದಿಢೀರ್ ಕ್ವಿಂಟಲ್ಗೆ 2,600 ರೂಪಾಯಿ ಗಡಿ ದಾಟಿದೆ. ಉತ್ತಮ ಗುಣಮಟ್ಟದ ಪುಣೆ ಈರುಳ್ಳಿ ಕ್ವಿಂಟಲ್ಗೆ ರೂ. 2,800, 2ನೇ ದರ್ಜೆಯ ಈರುಳ್ಳಿ ಕ್ವಿಂಟಲ್ಗೆ 1300 ರೂಪಾಯಿಯಿಂದ 2000 ರೂಪಾಯಿಗೆ ಭಾರಿ ಏರಿಕೆ ಆಗಿದೆ. ಮಾರುಕಟ್ಟೆಗೆ ಬರುತ್ತಿದ್ದ ಈರುಳ್ಳಿ ಕುಸಿತವೂ ಬೆಲೆ ಏರಿಕೆಗೆ ಕಾರಣವಾಗಿದೆ.
ಹುಬ್ಬಳ್ಳಿ ಎಪಿಎಂಸಿಗೆ ಸ್ಥಳೀಯ ಈರುಳ್ಳಿ 4045 ಕ್ವಿಂಟಾಲ್ ಆವಕವಿದೆ. ಪುಣೆ ಈರುಳ್ಳಿ 2866 ಕ್ವಿಂಟಾಲ್ ಆವಕವಿದ್ದು, ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಬರುತ್ತಿಲ್ಲ. ಅದರಲ್ಲೂ ರೈತರು ಬಿತ್ತನೆಯಲ್ಲಿ ನಿರತರಾಗಿದ್ದು, ಮಾರುಕಟ್ಟೆಗೆ ಈರುಳ್ಳಿ ಬರುತ್ತಿರುವುದು ತಡವಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಸಗಟು ಮಾರುಕಟ್ಟೆಯಲ್ಲಿ ಒಂದು ಬೆಲೆಯಾದ್ರೆ ಚಿಲ್ಲರೆ ಮಾರುಕಟ್ಟೆ ಹಾಗೂ ತರಕಾರಿ ಸಂತೆಯಲ್ಲಿ ಬೆಲೆ ಒಂದಕ್ಕೆ ಎರಡು ಪಟ್ಟು ಏರಿಕೆಯಾಗಿದೆ. ಒಂದು ಕೆಜಿ ಈರುಳ್ಳಿ 40-45 ರೂಪಾಯಿ ಇದೆ. ಇದು ಗ್ರಾಹಕರ ಕಣ್ಣಲ್ಲಿ ನೀರು ತರಿಸುವಂತಿದೆ.
ಮೊದಲೇ ಮುಂಗಾರು ಕೈ ಕೊಟ್ಟಿದೆ. ಹಿಂಗಾರು ಮಳೆ ಇಲ್ಲದೆ ರೈತರು ಪರದಾಡುತ್ತಿದ್ದಾರೆ. ಇದರ ಮಧ್ಯೆ ಈರುಳ್ಳಿ ಬೆಲೆ ಗಗನಕ್ಕೇರಿದ್ದು ನಮಗೆ ನುಂಗಲಾರದ ತುತ್ತಾಗಿದೆ. 15-20 ರೂಪಾಯಿ ಇದ್ದ ದರ ಏಕಾಏಕಿ 40-45 ರೂಪಾಯಿ ಆದ್ರೆ ಖರೀದಿಸುವದು ಹೇಗೆ?. ಜೀವನ ನಡೆಸುವುದೇ ದುಸ್ತರವಾಗಿದೆ ಎನ್ನುತ್ತಾರೆ ಗ್ರಾಹಕರಾದ ಮೆಹಬೂಬ್ ಹಾಗೂ ಮಂಜುನಾಥ್.
ದಾವಣಗೆರೆಯಲ್ಲಿ ಈರುಳ್ಳಿ ಮಾರುಕಟ್ಟೆ: ಜಿಲ್ಲೆಯಲ್ಲಿ ಮಳೆ ಅಭಾವದಿಂದ ಈರುಳ್ಳಿ ಬೆಳೆ ಕುಂಠಿತವಾಗಿದ್ದು, ತಕ್ಕಮಟ್ಟಿಗೆ ಬೆಲೆ ಏರಿಕೆಯಾಗಿದೆ. ಮಾರುಕಟ್ಟೆಗೆ ಸ್ಥಳೀಯ ಈರುಳ್ಳಿ ರಫ್ತು ಗಣನೀಯವಾಗಿ ಕಡಿಮೆಯಾಗಿದ್ದರೂ ಕೂಡ ದಾವಣಗೆರೆಯಲ್ಲಿ ಮಹಾರಾಷ್ಟ್ರದ ನಾಸಿಕ್ ಹಾಗೂ ಸ್ಥಳೀಯ ಈರುಳ್ಳಿಯ ಬೆಲೆ ಹಂತವಾಗಿ ದುಬಾರಿಯಾಗುತ್ತಿದೆ. ಬೆಳೆದ ಈರುಳ್ಳಿಯ ಬೆಲೆ ದಸರಾ ಹಬ್ಬದ ಬಳಿಕ ಇಲ್ಲವೇ ದೀಪಾವಳಿ ನಂತರವೇ ಮತ್ತಷ್ಟು ಗಗನಕ್ಕೇರುವ ಸಾಧ್ಯತೆಗಳಿವೆ. ಹೋಲೆಸೆಲ್ನಲ್ಲಿ 30 ರೂಪಾಯಿಗೆ ಕೆ ಜಿ ಈರುಳ್ಳಿ ಮಾರಾಟವಾಗುತ್ತಿದ್ದರೆ, ರಿಟೇಲ್ನಲ್ಲಿ 35 ರಿಂದ 40 ರೂಪಾಯಿಗೆ ಈರುಳ್ಳಿ ಮಾರಾಟವಾಗ್ತಿದೆ. ಕೆಲವೇ ದಿನಗಳಲ್ಲಿ ಈ ಬೆಲೆ ದ್ವಿಗುಣಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಮಳೆ ಕೈ ಕೊಟ್ಟಿದೆ. ಟೊಮೆಟೊ ಬಳಿಕ ಈರುಳ್ಳಿ ಬೆಲೆಯೂ ಗಗನಕ್ಕೇರಿಕೆಯಾಗಲಿದೆ ಎಂದು ಮನಗಂಡು ಅನೇಕರು ಬೆಳೆದಿದ್ದರು. ಆದರೆ ಮಳೆ ಅಭಾವದಿಂದ ಬೆಳೆ ನೆಲಕಚ್ಚಿದೆ. ಅದರಿಂದ ಜಮೀನಿನಲ್ಲಿ ದೊರೆಯುವ ಅಲ್ಪಸ್ವಲ್ಪ ಈರುಳ್ಳಿಯನ್ನು ರೈತರು ದಾವಣಗೆರೆ ಮಾರುಕಟ್ಟೆಗೆ ತರುತ್ತಿದ್ದಾರೆ. ಸ್ಥಳೀಯ ಈರುಳ್ಳಿ ಮಾರುಕಟ್ಟೆಗೆ ಸ್ವಲ್ಪ ಪ್ರಮಾಣದಲ್ಲಿ ಬರುತ್ತಿದ್ದರಿಂದ ಕಡಿಮೆ ಗುಣಮಟ್ಟದ ಈರುಳ್ಳಿ ಬೆಲೆ 20 ರಿಂದ 25ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದ ನಾಸಿಕ್ ಈರುಳ್ಳಿಯ ಬೆಲೆ 30-35 ರೂಪಾಯಿ ಆಗಿದ್ದು, ರಿಟೇಲ್ನಲ್ಲಿ 40 ರೂಪಾಯಿಗೆ ಒಂದು ಕೆಜಿ ಮಾರಾಟ ಆಗ್ತಿದೆ. ಹಳೇ ಈರುಳ್ಳಿ ಬರುತ್ತಿರುವುದರಿಂದ ಬೆಲೆ ಕಡಿಮೆ ಇದೆ. ನಾಸೀಕ್ ಈರುಳ್ಳಿ ಇಲ್ಲದ್ದಿದ್ದರೆ ಈರುಳ್ಳಿ ಬೆಲೆ ಐವತ್ತು ರೂಪಾಯಿ ಬೆಲೆ ದಾಟುವ ಸಂಭವ ದಟ್ಟವಾಗಿತ್ತು ಎಂದು ಈರುಳ್ಳಿ ದಲ್ಲಾಳಿ ಸಂಘದ ಅಧ್ಯಕ್ಷರ ಬಸವಲಿಂಗಪ್ಪ ಹೇಳಿದರು.