ಬೆಂಗಳೂರು:ಭಾರತೀಯ ಆಹಾರ ನಿಗಮ (ಎಫ್‌ಸಿಐ) ಕರ್ನಾಟಕಕ್ಕೆ ಅಕ್ಕಿ ಕೊಡುವ ಕಮಿಟ್ಮೆಂಟ್ (ಬದ್ಧತೆ) ಪತ್ರ ಬಹಿರಂಗಗೊಳಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಸಿ.ಟಿ. ರವಿಗೆ ತಿರುಗೇಟು ನೀಡಿದ್ದಾರೆ. ಎಫ್‌ಸಿಐ ಅಕ್ಕಿ ಕೊಡುವುದಾಗಿ ಹೇಳಿರುವ ಕಮಿಟ್ಮೆಂಟ್ ಪತ್ರ ತೋರಿಸಲಿ ಎಂದು ಸಿ.ಟಿ.ರವಿ ಸವಾಲು ಹಾಕಿದ್ದರು. ಇದೀಗ, ಇಲ್ಲಿದೆ ಎಫ್‌ಸಿಐ ಕಮಿಟ್‌ಮೆಂಟ್ ಪತ್ರ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಇಂತಹ ಬೇಜವಾಬ್ದಾರಿ ಹೇಳಿಕೆ, ಸುಳ್ಳು ಮತ್ತು ಅಪಪ್ರಚಾರದ ಗೀಳಿಗಾಗಿಯೇ ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿಯ ಇಂತಹ ನಾಯಕರನ್ನು ಸೋಲಿಸಿ ಮನೆಗೆ ಕಳಿಸಿರುವುದು ಎಂದು ಸಿಎಂ ಕಿಡಿ ಕಾರಿದ್ದಾರೆ. ಸಿ.ಟಿ. ರವಿ ಮತ್ತಿತರ ಬಿಜೆಪಿ ನಾಯಕರು ಮೊದಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಗೆ ಬೇಕಾಗುವ ಅಕ್ಕಿ ಪೂರೈಸುವಂತೆ ಮಾಡಬೇಕೇ ಹೊರತು, ಬಡವರ ಹೊಟ್ಟೆಗೆ ಹೊಡೆಯುವ ಕೇಂದ್ರ ಸರ್ಕಾರದ ಜನವಿರೋಧಿ ನಿಲುವನ್ನು ಬೆಂಬಲಿಸುವುದಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿ.ಟಿ. ರವಿ ಹೇಳಿದ್ದೇನು?:ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡುವುದಾಗಿ ಭಾರತೀಯ ಆಹಾರ ನಿಗಮ (ಎಫ್‌ಸಿಐ) ನೀಡಿದ ಕಮಿಟ್ಮೆಂಟ್ ಪತ್ರವನ್ನು ಸಿಎಂ ಸಿದ್ದರಾಮಯ್ಯ ತೋರಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸವಾಲು ಹಾಕಿದ್ದರು. ಕೇಂದ್ರದ ಒಪ್ಪಿಗೆ ಆಧಾರದ ಮೇಲೆ ಜುಲೈ 1ರಿಂದ 10 ಕೆಜಿ ಅಕ್ಕಿ ನೀಡುತ್ತೇವೆ ಎಂದಿದ್ದೆವು. ಬಳಿಕ ಕೇಂದ್ರ ಸರ್ಕಾರ ಉಲ್ಟಾ ಹೊಡೆಯುತ್ತಿದೆ ಎಂದು ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದರು. ಸಿದ್ದರಾಮಯ್ಯ ಸುಳ್ಳು ರಾಮಯ್ಯ ಅಲ್ಲ ಎನ್ನುವುದಾದರೆ ಎಫ್‌ಸಿಐ ಕಮಿಟ್ಮೆಂಟ್ ಪತ್ರವನ್ನು ತೋರಿಸಲಿ ಎಂದಿದ್ದರು.