ಬೆಂಗಳೂರು : ಫ್ಲೈ ಓವರ್‌ಗಳು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಸದ್ಯಕ್ಕೆ ಸಿಲಿಕಾನ್ ಸಿಟಿಯ ಜನರಿಗೆ ಕಾಡುತ್ತಿದೆ. ಸುಮ್ಮನಹಳ್ಳಿ ಮೇಲ್ಸೇತುವೆಯ ರೀತಿ ಬೇರೆ ಫ್ಲೈ ಓವರ್ ಸಮಸ್ಯೆ ಇದೆಯೇ ಎನ್ನುವುದರ ಕುರಿತು ಬಿಬಿಎಂಪಿ ಖಾಸಗಿ ಕಂಪನಿ ಮೂಲಕ ಆಡಿಟ್ ಮಾಡಿಸಿದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.
ಆಡಿಟ್ ನಲ್ಲಿ ನಗರದ ಎರಡು ಪ್ರಮುಖ ಮೇಲ್ಸೇತುವೆಗಳಲ್ಲಿ ದೋಷ ಕಂಡು ಬಂದಿದ್ದು, ಈ ಬಗ್ಗೆ ಪರಿಶೀಲಿಸಿ ದುರಸ್ತಿಗೊಳಿಸಲು ಪಾಲಿಕೆ ಮುಂದಾಗಿದೆ.
ಇನ್ಫ್ರಾ ಸಪೋರ್ಟ್ ಸಂಸ್ಥೆಯಿಂದ ಸದೃಢತೆ ಪರೀಕ್ಷೆ :ಬಿಬಿಎಂಪಿ ಫ್ಲೈ ಓವರ್ ಗಳ ಸದೃಢತೆ ಪರೀಕ್ಷೆಗೆ ಇನ್ಫಾ ಸಪೋರ್ಟ್ ಎಂಬ ಸಂಸ್ಥೆಯನ್ನು ನೇಮಿಸಿತ್ತು. ಈ ಸಂಸ್ಥೆ ನಗರದ 42ರ ಪೈಕಿ 25 ಫ್ಲೈಓವರ್ಗಳ ಸದೃಢತೆ ಪರೀಕ್ಷೆ ನಡೆಸಿ ಪಾಲಿಕೆಗೆ ಅಂತಿಮ ವರದಿ ಸಲ್ಲಿಸಿದೆ. ಅದರಲ್ಲಿ ಫ್ಲೈ ಓವರ್‌ನಲ್ಲಿ ದೋಷವಿರುವುದು ದೃಢಪಟ್ಟಿದೆ. ಹೊರ ವರ್ತುಲ ರಸ್ತೆಯಲ್ಲಿರುವ ಸುಮ್ಮನಹಳ್ಳಿ ಫ್ಲೈಓವರ್‌ನ ಸ್ಲಾಬ್‌ಗಳಲ್ಲಿ ವೈಟ್ ಪ್ಯಾಚಸ್ (ನೆಲ ಹಾಸು ಕಾಂಕ್ರಿಟ್‌ನಲ್ಲಿ ದೋಷ) ಇದೆ ಎನ್ನಲಾಗಿತ್ತು. ಇದೀಗ ಮೈಸೂರು ರಸ್ತೆಯ ಸಿರ್ಸಿ ಫ್ಲೈ ಓವರ್ ನಲ್ಲಿ ಬಿರುಕುಗಳಿವೆ ಎಂಬ ಅಘಾತಕಾರಿ ಅಂಶ ವರದಿಯಲ್ಲಿ ಬೆಳಕಿಗೆ ಬಂದಿದೆ.
ಲಕ್ಷಾಂತರ ಸವಾರರು ಪ್ರಯಾಣ : ಮೈಸೂರು ರಸ್ತೆಯ ಫ್ಲೈ ಓವರ್ ಬೆಂಗಳೂರು ನಗರದ ಮಧ್ಯ ಭಾಗದಲ್ಲಿರೋ ಅತಿ ಉದ್ದದ ಮೇಲ್ಸೇತುವೆ. ದಿನವೊಂದಕ್ಕೆ ಲಕ್ಷಾಂತರ ಮಂದಿ ಈ ಫ್ಲೈ ಓವರ್ ನಲ್ಲಿ ಪ್ರಯಾಣಿಸುತ್ತಾರೆ. ಕೃಷ್ಣರಾಜ ಮಾರುಕಟ್ಟೆಯಿಂದ ಸಿರ್ಸಿ ಸರ್ಕಲ್ ವರೆಗೆ ಇರುವ ಈ ಫ್ಲೈ ಓವರ್ ಇದಾಗಿದೆ.