ಬೆಂಗಳೂರು: ಮಲಗಿದ್ದ ಮಗಳನ್ನು ದೊಣ್ಣೆಯಿಂದ ಹೊಡೆದು ತಂದೆಯೇ ಕೊಲೆ ಮಾಡಿರುವ ಘಟನೆ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಧನಲಕ್ಷ್ಮೀ ಲೇಔಟ್ ದಲ್ಲಿ ನಡೆದಿದೆ. 32 ವರ್ಷದ ಮಗಳು ಆಶಾ ಕೊಲೆಯಾದವರು. ನಿನ್ನೆ ರಾತ್ರಿ ಈ ಪ್ರಕರಣ ನಡೆದಿದ್ದು, ಕೊಲೆಗೈದ ಆರೋಪಿ ತಂದೆ ರಮೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಇಎಲ್ದಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ಇತ್ತೀಚೆಗೆ ನಿವೃತ್ತಿ ಆಗಿದ್ದರು. ಮೃತ ಮಗಳು ಆಶಾ ಫ್ಯಾಷನ್ ಡಿಸೈನಿಂಗ್ ಕೋರ್ಸ್ದಲ್ಲಿ ಎಂಎಸ್ಸಿ ಮಾಡಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು.
ಯುವಕನನ್ನ ಪ್ರೀತಿಸಿ 2020ರಲ್ಲಿ ಪೋಷಕರ ವಿರೋಧದ ನಡುವೆಯೂ ಮದುವೆ ಮಾಡಿಕೊಂಡಿದ್ದರು. ಮದುವೆಯಾದ ಒಂದೇ ವರ್ಷದ ಅಂತರದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ದಂಪತಿ ದೂರವಾಗಿದ್ದರು. 2021ರಿಂದ ತಂದೆ ಮನೆಯಲ್ಲೇ ವಾಸ್ತವ್ಯ ಹೂಡಿದ್ದರು. ಆಶಾ, ಕ್ಷುಲ್ಲಕ ಕಾರಣಕ್ಕಾಗಿ ಪದೇ ಪದೆ ಕಿರಿ-ಕಿರಿ ಮಾಡುತ್ತಿದ್ದರು. ದಿನೇ ದಿನೆ ಮಗಳಿಂದ ಕಿರುಕುಳ ಹೆಚ್ಚಾಗಿತ್ತು. ಬುಧವಾರ ಸಹ ತಾಯಿ ಮಗಳೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ರಮೇಶ್ ನಿನ್ನೆ ರಾತ್ರಿ ಮಲಗಿದ್ದ ಮಗಳಿಗೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಮೃತ ಆಶಾರ ತಂದೆ ರಮೇಶ್ ಅವರನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದರು. ಆರೋಪಿ ರಮೇಶ್ ಬಾಯ್ಬಿಟ್ಟಿರುವ ಪ್ರಕಾರ, ಮೊದ ಮೊದಲು ಸರಿಯಿದ್ದ ಮಗಳು ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ಮನೆಯವರಿಗೆಲ್ಲಾ ವಿನಾಕಾರಣ ಕಿರುಕುಳ ನೀಡುತ್ತಿದ್ದಳು. ಸಣ್ಣ ಪುಟ್ಟ ವಿಚಾರಕ್ಕೂ ಸ್ವಾರ್ಥ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಳು. ಮದುವೆ ಮಾಡಿಸಿ ಸಾಗಿಸುವವರೆಗೂ ನೆಮ್ಮದಿ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಳಂತೆ.