ಆನೇಕಲ್(ಬೆಂಗಳೂರು): ಕ್ಷುಲ್ಲಕ ಕಾರಣಕ್ಕೆ ತಂದೆಯೋರ್ವ ತನ್ನ ಮಗನನ್ನೇ ಕತ್ತುಕೊಯ್ದು ಹತ್ಯೆಗೈದಿರುವ ಘಟನೆ ಆನೇಕಲ್ ಪಟ್ಟಣದ ನಾರಾಯಣಪುರದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಸುರೇಶ್ ಎಂದು ಗುರುತಿಸಲಾಗಿದೆ. ಯಲ್ಲಪ್ಪ ಕೊಲೆಗೈದ ಆರೋಪಿ.
ಆರೋಪಿ ಯಲ್ಲಪ್ಪ ಪ್ರತಿನಿತ್ಯ ಕುಡಿದು ಬಂದು ಪತ್ನಿ ಜೊತೆ ಜಗಳವಾಡುತ್ತಿದ್ದ. ಇಂದು ಸಂಜೆಯೂ ಕುಡಿದ ಅಮಲಿನಲ್ಲಿ ಬಂದು ಮತ್ತೆ ಪತ್ನಿ ಜೊತೆ ಕ್ಯಾತೆ ತೆಗೆದಿದ್ದಾನೆ. ಈ ವೇಳೆ ತಾಯಿಯನ್ನು ಬೈದಿದ್ದಕ್ಕೆ ಮಗ ಸುರೇಶ್ ತಂದೆ ಯಲ್ಲಪ್ಪನ ಜೊತೆಗೆ ಜಗಳವಾಡಿದ್ದ. ಇಬ್ಬರ ಜಗಳ ವಿಕೋಪಕ್ಕೆ ಹೋಗಿ ಯಲ್ಲಪ್ಪ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ.
ಗಂಭೀರವಾಗಿ ಗಾಯಗೊಂಡ ಸುರೇಶನನ್ನು ತಕ್ಷಣ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಅದಾಗಲೇ ಸುರೇಶ್ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ. ಮೃತ ಸುರೇಶ್ ಪೇಂಟಿಂಗ್ ವೃತ್ತಿ ಮಾಡಿಕೊಂಡಿದ್ದನು. ಆರೋಪಿ ಯಲ್ಲಪ್ಪನನ್ನು ಆನೇಕಲ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಮಾವನನ್ನು ಕಟ್ಟಿಗೆಯಿಂದ ಹೊಡೆದು ಕೊಂದ ಸೊಸೆ:ಮದ್ಯ ಸೇವಿಸಿ ಬಂದು ವಿನಾಕಾರಣ ತೊಂದರೆ ನೀಡುತ್ತಿದ್ದ ಮಾವನನ್ನು ಸೊಸೆ ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಅಡಬಾವಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮಾನಪ್ಪ ಮುದ್ದುರಂಗಪ್ಪ(65) ಎಂದು ಗುರುತಿಸಲಾಗಿದ್ದು, ನಾಗಮ್ಮ ಕೊಲೆಗೈದ ಆರೋಪಿ.
ಮೃತ ಮಾನಪ್ಪನ ಮಗ ಬಸವರಾಜಪ್ಪನಿಗೆ ಕಳೆದ ಕೆಲವು ವರ್ಷಗಳ ಹಿಂದೆ ನಾಗಮ್ಮನೊಂದಿಗೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಎರಡು ವರ್ಷಗಳ ಹಿಂದೆ ನಾಗಮ್ಮ ಪತಿ ಬಸವರಾಜಪ್ಪ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಬಳಿಕ ನಾಗಮ್ಮ ಅತ್ತೆ, ಮಾವ, ಮಕ್ಕಳೊಂದಿಗೆ ಗಂಡನ ಮನೆಯಲ್ಲೇ ವಾಸವಿದ್ದಳು. ಈ ಸಂದರ್ಭ ಮಾನಪ್ಪ ಮದ್ಯ ಸೇವಿಸಿ ಬಂದು ಸೊಸೆಗೆ ತೊಂದರೆ ನೀಡುತ್ತಿದ್ದ ಎಂದು ಸೊಸೆ ನಾಗಮ್ಮ ಆರೋಪಿಸಿದ್ದಾಳೆ.
ಕಳೆದ ಮೂರು ದಿನಗಳ ಹಿಂದೆ ಮಾನಪ್ಪ ರಾತ್ರಿ ವೇಳೆ ಮದ್ಯ ಕುಡಿದು ಬಂದು ಸೊಸೆ ಬಳಿ ನೀರು ಕೊಡುವಂತೆ ಕೇಳಿದ್ದಾನೆ. ಆಗ ಸೊಸೆ ನಾಗಮ್ಮ, ನಿಮ್ಮ ಚಾಕರಿ ಮಾಡಲು ನಾನು ನಿಮ್ಮ ಆಳು ಅಲ್ಲ ಎಂದು ಹೇಳಿದ್ದಾಳೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭ ಮನೆಯ ಪಡಸಾಲೆಯಲ್ಲಿ ಇದ್ದ ಕಟ್ಟಿಗೆಯಿಂದ ಮಾವನಿಗೆ ಹೊಡೆದಿದ್ದಾಳೆ. ಈ ವೇಳೆ ಮಾನಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಪ್ರಕರಣ ಸಂಬಂಧ ನಾಗಮ್ಮನನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಮೈಸೂರು: ಅತ್ಯಾಚಾರ ಅಪರಾಧಿಗೆ ದಂಡಸಮೇತ 10 ವರ್ಷ ಜೈಲು ಶಿಕ್ಷೆ