ಬೆಂಗಳೂರು:ಪ್ರಿಯಕರನ ಜೊತೆ ಓಡಿ ಹೋಗಿದ್ದ ಪುತ್ರಿಯನ್ನು ತಂದೆಯೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ. ಮೈಸೂರಿನ ಹೆಚ್.ಡಿ.ಕೋಟೆ ಮೂಲದ ಪಲ್ಲವಿ ಕೊಲೆಯಾದ ಯುವತಿ. ಕೃತ್ಯ ಎಸಗಿದ ಆಕೆಯ ತಂದೆ ಗಣೇಶ್ ಎಂಬಾತನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪರಪ್ಪನ ಅಗ್ರಹಾರ ಸಮೀಪದ ನಾಗನಾಥಪುರದ ಡಾಕ್ಟರ್ಸ್ ಲೇಔಟ್‌ನಲ್ಲಿ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಪ್ರಕರಣದ ವಿವರ: ಹೆಚ್.ಡಿ.ಕೋಟೆಯ ರೈತ ಗಣೇಶ್ ಮತ್ತು ಶಾರದಮ್ಮ ದಂಪತಿಯ ಪುತ್ರಿ ಪಲ್ಲವಿ ಮನೆ ಸಮೀಪದ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಇದೇ ಕಾಲೇಜಿನ ಯುವಕನೊಬ್ಬ ಪರಿಚಯವಾಗಿ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದ ಗಣೇಶ್, ಪುತ್ರಿಗೆ ಬುದ್ದಿವಾದ ಹೇಳಿದ್ದ. ಅಲ್ಲದೆ, ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸುವ ಹಾಗೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದ. ಇದರಿಂದ ಆತಂಕಗೊಂಡ ಪಲ್ಲವಿ, ಇತ್ತೀಚೆಗೆ ಯುವಕನ ಜೊತೆ ಓಡಿ ಹೋಗಿದ್ದಳು.
ಬಳಿಕ ಆಕೆಯನ್ನು ಸಂಬಂಧಿಕರ ಸಹಾಯದಿಂದ ಪತ್ತೆ ಹಚ್ಚಿ ಮನೆಗೆ ಕರೆತಂದು ವ್ಯಾಸಂಗ ಮೊಟಕುಗೊಳಿಸಿದ್ದರು. ಅಲ್ಲದೆ, ಪರಪ್ಪನ ಅಗ್ರಹಾರದ ಡಾಕ್ಟರ್ಸ್ ಕಾಲೋನಿಯಲ್ಲಿ ವಾಸವಾಗಿದ್ದ ತನ್ನ ನಾದಿನಿ ಗೀತಾ ಮನೆಯಲ್ಲಿ ಪುತ್ರಿಯನ್ನು ಇರಿಸಿದ್ದರು. ಆದರೆ, ಮತ್ತೆ ಯುವಕನನ್ನು ಸಂಪರ್ಕಿಸಿದ್ದ ಪಲ್ಲವಿ, ಅ. 14ರಂದು ಚಿಕ್ಕಮನ ಮನೆಯಿಂದ ನಾಪತ್ತೆಯಾಗಿದ್ದಳು. ಈ ವಿಚಾರ ತಿಳಿದ ಗಣೇಶ್ ದಂಪತಿ ಬೆಂಗಳೂರಿಗೆ ಬಂದು ಅ.17ರಂದು ಪರಪ್ಪನ ಅಗ್ರಹಾರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಳಿಕ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಎರಡೇ ದಿನದಲ್ಲಿ ಪಲ್ಲವಿಯನ್ನು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದರು.