ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಡಾ. ಫಾರೂಕ್ ಅಬ್ದುಲ್ಲಾ ಅವರು ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರನ್ನು ಪದ್ಮನಾಭನಗರದ ಅವರ ನಿವಾಸದಲ್ಲಿ ಇಂದು ಭೇಟಿ ಮಾಡಿ ಮಾತುಕತೆ ನಡೆಸಿದರು. ಮನೆಯ ಗೇಟ್ ಬಳಿ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರಿಗೆ ಹೂಗುಚ್ಛ ನೀಡಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆತ್ಮೀಯವಾಗಿ ಬರಮಾಡಿಕೊಂಡರು.
ನಂತರ ದೇವೇಗೌಡರನ್ನು ಭೇಟಿ ಮಾಡಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ, ಗೌಡರ ಆರೋಗ್ಯ ವಿಚಾರಿಸಿದರು. ಈ ವೇಳೆ ಇಬ್ಬರು ನಾಯಕರು ಪರಸ್ಪರ ಕುಶಲೋಪರಿ ವಿಚಾರಿಸಿದರು. ಚರ್ಚೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ," ದೇಶದ ಹಿತದೃಷ್ಟಿಯಿಂದ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋಗಬೇಕು, ಆಗ ಮಾತ್ರ ನಮಗೆ ನಿಧಾನವಾಗಿ ದಾರಿ ಸಿಗುತ್ತದೆ. ಇದು ಬಹಳ ಮುಖ್ಯವಾದ ವಿಚಾರ ಎಂದು ಪ್ರಾದೇಶಿಕ ಪಕ್ಷಗಳಿಗೆ ಕರೆ ನೀಡಿದರು. ಬಳಿಕ, ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಬೇಕಾ?, ದೇಶ ಒಗ್ಗಟ್ಟಾಗಿರುವುದು ಬೇಕಾ?. ಇದು ವಿವಿಧತೆಯ ದೇಶ. ಕರ್ನಾಟಕ ಕಾಶ್ಮೀರ ನಡುವೆ ಸಾಮ್ಯತೆಗಳಿಲ್ಲ. ದೇಶ ಉಳಿಬೇಕು ಅಂದರೆ ನಾವೆಲ್ಲರೂ ಉಳಿಬೇಕು" ಎಂದು ಹೇಳಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಭೇಟಿ ವಿಚಾರದ ಕುರಿತು ಪ್ರತಿಕ್ರಿಯಿಸಿ, "ಇದು ಒಂದು ಸೌಜನ್ಯದ ಭೇಟಿ. ಅವರು ಪ್ರಧಾನಿಯಾಗಿದ್ದಾಗ ಕಾಶ್ಮಿರಕ್ಕೆ ನೀಡಿದ ಕೊಡುಗೆಗೆ ಧನ್ಯವಾದ ಹೇಳಿದ್ದೇನೆ. ಯಾರು ಸಹ ಕಾಶ್ಮೀರಕ್ಕೆ ಬಾರದಿದ್ದಾಗ ದೇವೇಗೌಡರು ಬಂದಿದ್ದರು. ಬಾರ್ಡರ್ ಭಾಗಕ್ಕೂ ಭೇಟಿ ನೀಡಿದ್ದರು. ಹೀಗಾಗಿ ಅವರಿಗೆ ಕೃತಜ್ಞತೆಯನ್ನು ತಿಳಿಸಿದ್ದೇನೆ" ಎಂದರು.
ದಿ ಕಾಶ್ಮೀರಿ ಫೈಲ್ಸ್, ಕೇರಳ ಸ್ಟೋರಿ ಸಿನಿಮಾಗಳ ಬಳಿಕ ಮತ್ತೊಂದು ಚಿತ್ರ ಬಿಡುಗಡೆ ವಿಚಾರ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಫಾರೂಕ್ ಅಬ್ದುಲ್ಲಾ ಅವರು, "ಈ ಚಿತ್ರಗಳು ದೇಶವನ್ನು ವಿಭಜನೆ ಮಾಡುವುದಕ್ಕೆ ಮಾಡಿರುವ ಸಿನಿಮಾಗಳು. ಭಾರತ ವಿಭಜನೆ ಮಾಡುವಂತಹ ಸಿನಿಮಾಗಳನ್ನು ತೆಗೆಯುವುದರಿಂದ ಸಂವಿಧಾನದ ವಿಭಜನೆ ಮಾಡಿದಂತೆ ಆಗುತ್ತದೆ. ಹಿಂದೂ, ಮುಸ್ಲಿಂ ಯಾವುದೇ ಸಮಾಜವಾಗಿರಲಿ ಅಥವಾ ಯಾವುದೇ ರಾಜ್ಯವಾಗಿರಲಿ ಈ ರೀತಿಯ ಚಿತ್ರಗಳು ದೇಶಕ್ಕೆ ಮಾರಕವಾಗಿದೆ" ಎಂದು ಹೇಳಿದರು.