ಬೆಂಗಳೂರು:ಮುಂಗಾರು ಪೂರ್ವ ಮಳೆ ರೈತರಲ್ಲಿ ಹರ್ಷ ತಂದಿದ್ದು, ಲಾಕ್ಡೌನ್ ನಡುವೆಯೂ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ನಕಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟದ ವಿರುದ್ಧ ಕಣ್ಣಿಟ್ಟಿರುವ ರಾಜ್ಯ ಸರ್ಕಾರ ಫಸಲ್ ಭಿಮಾ, ರೈತ ಸಮ್ಮಾನ್ ಯೋಜನೆಯಡಿ ಹಣ ಬಿಡುಗಡೆ ಮಾಡಿ ಸರ್ಕಾರ ಉತ್ತೇಜನ ನೀಡಿದೆ.
ರೈತರು ಮುಂಗಾರು ಪೂರ್ವ ಬಿತ್ತನೆಯಲ್ಲಿ ತೊಡಗಿದ್ದು, ಈಗಾಗಲೇ ಐದು ಜಿಲ್ಲೆಗಳಲ್ಲಿ 9 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ. ರೈತರು ಮೆಕ್ಕೆಜೋಳ, ಹೆಸರು, ಉದ್ದು, ತೊಗರಿ, ಅಲಸಂದಿ ಬಿತ್ತನೆ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕದ ಮಳೆ ಬಿದ್ದ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಚುರುಕಾಗಿ ನಡೆಯುತ್ತಿದ್ದು, ಬಿತ್ತನೆಗೆ ಜೂನ್ ಅಂತ್ಯದವರೆಗೆ ಕಾಲಾವಕಾಶವಿದೆ. ರಾಗಿ ಬಿತ್ತನೆಗೆ ಜುಲೈವರೆಗೂ ಅವಕಾಶವಿದೆ. ಹಾಗಾಗಿ ದಕ್ಷಿಣ ಕರ್ನಾಟಕದ ರಾಗಿ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ ಎಂದರು.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕೃಷಿ ಚಟುವಟಿಕೆಗಳಿಗೆ ಯಾವುದೇ ಲಾಕ್ಡೌನ್ ನಿರ್ಬಂಧಗಳಿಲ್ಲ. ಬಿತ್ತನೆ ಬೀಜ, ರಸಗೊಬ್ಬರ ಮಾರಾಟದ ಮೇಲಿನ ಹಾಗೂ ಕೃಷಿ ಉಪಯೋಗಿ ಯಂತ್ರಗಳ ಬಳಕೆಯ ಮೇಲಿನ ನಿರ್ಬಂಧಗಳನ್ನು ಸರ್ಕಾರ ತೆಗೆದುಹಾಕಿದೆ. ಕೃಷಿ ಪರಿಕರ ಮತ್ತು ಬೀಜ,ಗೊಬ್ಬರ ಮಾರಾಟಗಾರರಿಗೆ ಗ್ರೀನ್ ಪಾಸ್ ಕೂಡ ವಿತರಿಸಲಾಗಿದೆ. ಹಾಗಾಗಿ ಕೃಷಿ ಯಂತ್ರಧಾರೆ ಯೋಜನೆ ಪ್ರಯೋಜನ ರೈತನಿಗೆ ದೊರೆಯುತ್ತಿದೆ ಎಂದರು.
ಬಿತ್ತನೆ ಬೀಜಕ್ಕೆ ಸಮಸ್ಯೆ ಇಲ್ಲ :
ಮುಂಗಾರು ಬಿತ್ತನೆಗೆ ರಾಜ್ಯದ ರೈತನಿಗೆ 5.97 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜದ ಅಗತ್ಯವಿದೆ. ಆದರೆ, ಸರ್ಕಾರ ಮುಂಜಾಗ್ರತಾ ಕ್ರಮವಾಗಿ 7.29 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಮಾಡಿಕೊಂಡಿದೆ. ಜಿಲ್ಲೆಗಳಿಗೆ ಈಗಾಗಲೇ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗುತ್ತಿದೆ. ಮೆಕ್ಕೆ ಜೋಳ ಮತ್ತು ಶೇಂಗಾ ಬಿತ್ತನೆ ಬೀಜದ ಕೊರತೆ ಬಾರದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಮುಂಗಾರು ಬಿತ್ತನೆ ಪ್ರದೇಶಗಳಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಾಗಿಸಲಾಗುತ್ತಿದೆ. 10-15 ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ರೈತರಿಗೆ ಬೇಕಾದ ವ್ಯವಸ್ಥೆಗಳನ್ನು ಕೃಷಿ ಇಲಾಖೆ ಮಾಡುತ್ತಿದೆ ಎಂದು ಹೇಳಿದರು.
ನಕಲಿ ಬಿತ್ತನೆ ಬೀಜ, ರಸಗೊಬ್ಬರ ವಿರುದ್ಧ ಸಮರ ಸಾರಿರುವ ಸರ್ಕಾರ, ರಾಜ್ಯದ ಹಲವೆಡೆ ದಾಳಿ ನಡೆಸಿ ನಕಲಿ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟಗಾರರನ್ನು ಪತ್ತೆ ಮಾಡುತ್ತಿದೆ. ಈಗಾಗಲೇ ಹಲವು ಕಡೆ ದಾಳಿ ನಡೆಸಿ ನಕಲಿ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಈ ಬಾರಿ ಪೂರ್ವ ಮುಂಗಾರು ಮಳೆ ರೈತನಲ್ಲಿ ಉತ್ಸಾಹ ತುಂಬಿದೆ. ಮುಂಗಾರು ಹಂಗಾಮಿನ ಗುರಿ 73.00 ಲಕ್ಷ ಹೆಕ್ಟೇರ್, ಪೂರ್ವ ಮುಂಗಾರಿನ ಗುರಿ 2.22 ಲಕ್ಷ ಹೆಕ್ಟೇರ್, ಹಾಲಿ ಬಿತ್ತನೆ ವಿಸ್ತಿರ್ಣ 15719 ಹೆಕ್ಟೇರ್. ಬಿತ್ತನೆ ಬೀಜಗಳ ಬೇಡಿಕೆ 14,171 ಕ್ವಿಂಟಾಲ್, ಹಾಲಿ ದಾಸ್ತಾನು 15,066.5 ಕ್ವಿಂಟಾಲ್ ಮಾಡಲಾಗಿದೆ. 5,391 ಕ್ವಿಂಟಾಲ್ ವಿತರಿಸಲಾಗಿದೆ ಎಂದರು.
ರಸಗೊಬ್ಬರ ಕೊರತೆ ಇಲ್ಲ :
ಮುಂಗಾರು ಬಿತ್ತನೆಗೆ ರಾಜ್ಯಕ್ಕೆ ಸುಮಾರು 22.85 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆಯಿದೆ. ಪ್ರಸ್ತುತ ಮುಂಗಾರು ಪೂರ್ವ ಬಿತ್ತನೆಗೆ ಏಪ್ರಿಲ್ ತಿಂಗಳಿಗೆ 2.57 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು, 7.09 ಲಕ್ಷ ಮೆಟ್ರಿಕ್ ಟನ್ ಕಾಪು ದಾಸ್ತಾನಿದೆ. ರೈತರ ಯೂರಿಯಾ, ಡಿಎಪಿ, ಕಾಂಪ್ಲೆಕ್ಸ್, ಎಂಒಪಿ ಹೀಗೆ ಯಾವುದೇ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಬೇಡಿಕೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ರಸಗೊಬ್ಬರ ಹಂಚಿಕೆ ಮಾಡಲಿದೆ. ಕಾರಣ ರಾಜ್ಯಕ್ಕೆ ರಸಗೊಬ್ಬರದ ಕೊರತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
2021-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955, ಬೀಜ ನಿಯಂತ್ರಣ ಆದೇಶ 1983ರ ನಿಯಮ ಉಲ್ಲಂಘನೆ ಮಾಡಿದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಿ, 19,894.1 ಕ್ವಿಂಟಾಲ್ ಅಂದರೆ ಅಂದಾಜು ಮೌಲ್ಯ 10.77 ಕೋಟಿ (ಮುಸುಕಿನ ಜೋಳ 10,194 ಕ್ವಿಂಟಾಲ್, ಸೂರ್ಯಕಾಂತಿ 288.4 ಕ್ವಿಂಟಾಲ್, ಹತ್ತಿ 0.16 ಕ್ವಿಂಟಾಲ್) ಮೊತ್ತದ ನಕಲಿ ಬಿತ್ತನೆ ಬೀಜ ವಶಪಡಿಸಿಕೊಳ್ಳಲಾಗಿದೆ ಎಂದರು.