ಬೆಂಗಳೂರು: ಬೆಲೆ ಏರಿಳಿತವಾದರೆ ನಾವು ಯಾರ ಬಳಿ ಕೇಳಬೇಕು, ಯಾರಿಗೆ ಪ್ರಶ್ನೆ ಮಾಡಬೇಕು ಎಂದು ಸರ್ಕಾರ ಅನುಮೋದನೆ ಮಾಡಿದ ಕೃಷಿ ಮಸೂದೆ ವಿರುದ್ಧ ರೈತರು ಕಿಡಿಕಾರಿದ್ದಾರೆ.
ಕೇಂದ್ರದ ಕೃಷಿ ಮಸೂದೆ ಬಗ್ಗೆ ರೈತರ ಅಭಿಪ್ರಾಯವೇನು ಗೊತ್ತಾ? - ಕೃಷಿ ಮಸೂದೆ-2020 ವಿರುದ್ಧ ಪ್ರತಿಭಟನೆ
ಸಂಸತ್ತಿನ ಅನುಮೋದನೆ ಪಡೆದ ಕೃಷಿ ಮಸೂದೆ -2020 ವಿರೋಧಿಸಿ ಬೆಂಗಳೂರಿನಲ್ಲಿ ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ಇದೇ ವೇಳೆ ಕೃಷಿ ಮಸೂದೆ ತಮ್ಮಲ್ಲಿ ಆತಂಕ ಸೃಷ್ಟಿಸಿದೆ ಎಂದು ರೈತರು ಹೇಳಿದ್ದಾರೆ.
ಇಂದು ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೆ ಬಂದ ಪ್ರತಿಭಟನಾಕಾರರಿಗೆ ಎಪಿಎಂಸಿ ಕಾಯ್ದೆಯಡಿ ಮಧ್ಯವರ್ತಿಗಳ ಕಾಟವಿರುವುದಿಲ್ಲ ಆದ್ರೂ ವಿರೋಧ ಯಾಕೆ ಎಂದು ಈಟಿವಿ ಭಾರತ ಪ್ರಶ್ನೆ ಮಾಡಿತು, ಇದಕ್ಕೆ ರೈತರು ಉತ್ತರಿಸಿದರು.
ಎಪಿಎಂಸಿಯಲ್ಲಿ ಸರ್ಕಾರ ಪಾತ್ರವಿದ್ದರೆ ನಮ್ಮ ಬೆಳೆಗೆ ನಿಗಧಿತ ಬೆಲೆ ಸಿಗತ್ತೆ, ಇಷ್ಟಲ್ಲದೆ ಖಾಸಗಿ ಸಂಸ್ಥೆಯವರು ಕೇವಲ ಉತ್ತಮ ಗುಣಮಟ್ಟದ ಬೆಳೆಗಳನ್ನು ಸಂಗ್ರಹಿಸಿಡುವ ಮೂಲಕ ಸ್ವಲ್ಪ ಕಡಿಮೆ ಪ್ರಮಾಣದ ಗುಣಮಟ್ಟವಿರುವ ಬೆಳೆಗಳನ್ನು ಕೊಳ್ಳಲು ನಿರಾಕರಿಸುತ್ತಾರೆ. ಇದರಿಂದ ರೈತರಿಗೆ ನಷ್ಟವಾಗುತ್ತದೆ ಎಂದು ತುಮಕೂರು ಮೂಲದ ರೈತ ಮಹೇಶ್ ಕುಮಾರ್ ಹೇಳಿದರು.
ನಂತರ ಹುಣಸೂರು ಭಾಗದ ರೈತರು ಮಾತನಾಡಿ, ಎಪಿಎಂಸಿಯಲ್ಲಿ ಸರ್ಕಾರದ ಪಾತ್ರ ಇದ್ದರೆ ನಾವು ಬೆಂಬಲ ಬೆಲೆ ಸಿಗದಿದ್ದರೆ ಪ್ರಶ್ನಿಸಬಹುದು. ಖಾಸಗಿ ಸಂಸ್ಥೆಗೆ ಪ್ರಶ್ನಿಸಲು ಅಸಾಧ್ಯ, ಇನ್ನು ಪಂಪ್ ಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಅದೇ ಖಾಸಗಿ ಸಂಸ್ಥೆಯವರು ಹಣ ಕೇಳುತ್ತಾರೆ ಎಂದು ಮುನಿಯಪ್ಪ ಆತಂಕ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ರೈತ ಸಯ್ಯದ್ ಸರ್ಕಾರ ಪಾತ್ರ ಇದ್ದರೆ ನಮಗೆ ಒಂದು ಭರವಸೆ ಇರತ್ತೆ, ಖಾಸಗಿ ಸಂಸ್ಥೆಗಳಿಗೆ ಕೃಷಿ ಹೋದರೆ ರೈತರಿಗೆ ಮೋಸವಾಗುವುದು ನಿಶ್ಚಿತ ಎಂದರು.