ಬೆಂಗಳೂರು :ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಭೂಸುಧಾರಣೆ, ಎಪಿಎಂಸಿ, ವಿದ್ಯುತ್ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಇಂದು ತೀವ್ರ ಸ್ವರೂಪ ಪಡೆದಿದೆ.
ಫ್ರೀಡಂಪಾರ್ಕ್ನಲ್ಲಿ ಐಕ್ಯ ಹೋರಾಟ ಸಮಿತಿ ಪ್ರತಿಭಟನೆ, ಮೌರ್ಯ ಸರ್ಕಲ್ ಬಳಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ಫ್ರೀಡಂಪಾರ್ಕ್ ಮುಂಭಾಗದ ರಸ್ತೆಯಲ್ಲಿ ಬೆಳಗಾವಿ, ಹುಬ್ಬಳ್ಳಿ ಭಾಗದ ರೈತರು ಬೆಂಗಳೂರು ಚಲೋ ನಡೆಸಿದರು. ಈ ವೇಳೆ ಫ್ರೀಡಂ ಪಾರ್ಕ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರನ್ನು ರೈತರು ತರಾಟೆಗೆ ತೆಗೆದುಕೊಂಡ ಘಟನೆ ಸಹ ನಡೆಯಿತು.
ಬಳಿಕ ಮಾತನಾಡಿದ ಅವರು, ರಾಜ್ಯದ ಅನೇಕ ಕಡೆಯಿಂದ ಬೆಂಗಳೂರಿಗೆ ಆಗಮಿಸಿದ್ದೀರಿ. ಅನೇಕ ಸಮಸ್ಯೆ ವಿಚಾರ ಮಾಡಿದ್ದೇವೆ. ವಿಜಯಪುರ, ಬಾಗಲಕೋಟೆ, ಕೊಪ್ಪಳ, ಬೆಳಗಾವಿ ಸಂಚಾರ ಮಾಡಿ ಸಮಸ್ಯೆ ಆಲಿಸಿದ್ದೇವೆ. ಅಂಕಿ ಅಂಶದ ಪ್ರಕಾರ ಕ್ರಶ್ ಮಾಡಿರೋ ಕಬ್ಬು ಬಾಕಿ, 10,655 ಕೋಟಿ ರೂ. ಮಲಪ್ರಭಾದಲ್ಲಿ 20 ಕೋಟಿ ರೂ. ಸಾವರಿನ್ ಶುಗರ್ಸ್ ತೇರದಾಳಕ್ಕೂ ಬಾಕಿ ನೀಡಬೇಕು.
ಬಾಯ್ಲರ್‌ಗೆ ₹50 ಕೋಟಿ ನೀಡಬೇಕು ಅನ್ನೋ ಸಮಸ್ಯೆ ಹೇಳಲಾಗಿದೆ. ಅಧಿಕೃತವಾಗಿ ಎಷ್ಟು ನೀಡಬೇಕು ಅನ್ನೋದನ್ನು ದಾಖಲೆ ನೀಡಿ. ಅದರ ಬಾಕಿ ನೀಡಲು ನಿರ್ಣಯ ತೆಗೆದುಕೊಳ್ಳುತ್ತೇವೆ. ಕಬ್ಬಿನ ಜೊತೆಯಲ್ಲಿ ಇತರೆ ಬೆಳೆ ಬೆಳೆಯೋ ರೈತರ ಬಾಕಿ ಕೂಡ ಉಳಿದಿದೆ. ಹಳೆ ಮೈಸೂರು ಭಾಗದಲ್ಲಿ ಈಗ ಕಟಾವು ಶುರುವಾಗಲಿದೆ.
ಕೋವಿಡ್ ಸಂದರ್ಭದಲ್ಲಿ ಕಬ್ಬು ಬೆಳೆಗಾರರು ಇತರೆ ರೈತರಿಗೆ ಹೋಲಿಸಿದ್ರೆ ಬೆಳೆ ಬೆಳೆದಿದ್ದಾರೆ. ಡಿಸಿಸಿ ಹೊರತು ಪಡಿಸಿ ಉಳಿದ ಬ್ಯಾಂಕ್ಗಳಿಗೂ 20 ಕೋಟಿ ರೂ. ನೀಡಲಾಗಿದೆ. 1 ಲಕ್ಷದ 16 ಸಾವಿರ ಟನ್ ಸಕ್ಕರೆ ಮಾರಿ, ರೈತರಿಗೆ ಹಣ ನೀಡಲಾಗಿದೆ. ಶೇ.99ರಷ್ಟು ಬಾಕಿ ನೀಡುವ ಪ್ರಯತ್ನ ಮಾಡಿದ್ದೇವೆ ಎಂದರು. ಇದಕ್ಕೆ ಸಮ್ಮತಿ ಸೂಚಿಸದ ರೈತರು ಸಚಿವರು ಕೊಡುತ್ತಿರುವ ಅಂಕಿಅಂಶ ಸರಿಯಾಗಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ರೈತರ ಹೋರಾಟಕ್ಕೆ ಹೆಚ್ ಡಿ ರೇವಣ್ಣ ಬೆಂಬಲ :ಮಾಜಿ ಸಚಿವ ಹೆಚ್ ಡಿ ರೇವಣ್ಣ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಬಳಿಕ ಮಾತನಾಡಿದ ಅವರು, ಈ ಕೂಡಲೇ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ವಾಪಸ್ ಪಡೆಯಬೇಕು. ಈ ಕಾಯ್ದೆ ರೈತ ವಿರೋಧಿ. ಇದರಿಂದ ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಸಹಾಯಕವಾಗುತ್ತದೆ ಅಷ್ಟೇ.. ನಾವು ಇದರ ವಿರುದ್ಧ ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತೇವೆ.
ರೈತರ ಧರಣಿಗೆ ಬೆಂಬಲ ನೀಡಿದ ಹೆಚ್ ಡಿ ರೇವಣ್ಣ ಪಕ್ಷದ ವರಿಷ್ಠ ದೇವೆಗೌಡ್ರು ಕೂಡ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎರಡು ಕೂಡ ಒಟ್ಟು ಸೇರಿ ಈ ಕಾಯ್ದೆ ಹಿಂಪಡೆಯಬೇಕು ಎಂದರು.
2ನೇ ದಿನದ ಅಹೋರಾತ್ರಿ ರೈತ ಹೋರಾಟ 3ನೇ ದಿನಕ್ಕೆ ಮುಂದುವರಿಕೆಯಾಗಿದೆ. ಶುಕ್ರವಾರದಂದು ಕರ್ನಾಟಕ ಬಂದ್ಗೆ ಕರೆ ಕೊಡುವ ಬಗ್ಗೆ ನಾಳೆ ಅಂತಿಮವಾಗಿ ತಿಳಿಸಲಿದ್ದಾರೆ. ನಗರದ ವಿವಿಧ ಆಟೋ, ಓಲಾ, ವ್ಯಾಪಾರಿಗಳ ಸಂಘಟನೆ ಬಂದ್ಗೆ ಬೆಂಬಲ ನೀಡಿವೆ.