ಬೆಂಗಳೂರು :2022 ರ ವಿದ್ಯುತ್ ಕಾಯ್ದೆ ಖಾಸಗೀಕರಣ ತಿದ್ದುಪಡಿ ಕೈಬಿಡಬೇಕು ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಹುನ್ನಾರ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಮುಖಂಡರು ಬೆಂಗಳೂರು ವಿಧಾನಸೌಧ ಚಲೋ ನಡೆಸಿದರು. ಈ ವೇಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.
ಸಂಗೊಳ್ಳಿರಾಯಣ್ಣ ರೈಲ್ವೇ ನಿಲ್ದಾಣದ ಬಳಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಜಮಾಯಿಸಿದ ರೈತ ನಾಯಕರು ವಿಧಾನಸೌಧ ಚಲೋ ನಡೆಸಿ, ಫ್ರೀಡಂ ಪಾರ್ಕಿನ ಮೈದಾನದ ಬಳಿಯಿಂದ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ರೈತ ನಾಯಕರಾದ ಜಗಜೀತಸಿಂಗ್ ದಲ್ಲೇವಾಲ, ಶಿವಕುಮಾರ, ದೈವಸಿಗಾಮಣಿ, ಕೆ.ವಿ.ಬಿಜು, ಅಭಿಮನ್ಯು ಕೊಹಾರ ಸೇರಿದಂತೆ ನೂರಾರು ರೈತರನ್ನು ಬಂಧಿಸಿ ವಾಹನದಲ್ಲಿ ಕರೆದೊಯ್ದರು.