ಯಲಹಂಕ (ಬೆಂಗಳೂರು): ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಮಾಡಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಿರುದ್ದ, ಯಾವುದೇ ಕಾರಣಕ್ಕೂ ಸೂಕ್ತ ಪರಿಹಾರ ನೀಡದೇ ಭೂಸ್ವಾಧೀನಕ್ಕೆ ಸಹಕರಿಸಲ್ಲ ಎಂದು ಯಲಹಂಕ ತಾಲೂಕಿನ 17 ಹಳ್ಳಿಗಳ ರೈತರು ದಶಕದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇಂದು ಬಿಡಿಎ ಅಧಿಕಾರಿಗಳು ಪೊಲೀಸರ ಸಮೇತವಾಗಿ ಏಕಾಏಕಿ ಜೆಸಿಬಿಯೊಂದಿಗೆ ಕಾಮಗಾರಿಗೆ ಆಗಮಿಸಿದ್ದರು. ಇದಕ್ಕೆ ಅಡ್ಡಿಪಡಿಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದರು.
ವಿವರ: ಬಿಡಿಎ ಅಧ್ಯಕ್ಷರು ಬಡಾವಣೆ ನಿರ್ಮಾಣವನ್ನು ಶತಾಯಗತಾಯ ಮಾಡಿಯೇ ತೀರಲು ಲೇಔಟ್ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಇಂದು ಅಧಿಕಾರಿಗಳು ಪೊಲೀಸರೊಂದಿಗೆ ಕಾಮಗಾರಿಗೆ ಆಗಮಿಸಿದ್ದಾರೆ. ಸೂಕ್ತ ಪರಿಹಾರ ನೀಡದೇ ಕಾಮಗಾರಿಗೆ ಅವಕಾಶ ನೀಡಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಶ್ಯಾಮರಾಜಪುರ, ವೀರಸಾಗರ, ಬೆಟ್ಟಹಳ್ಳಿ ರೈತರ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ನೂರಾರು ರೈತ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು. ಯಲಹಂಕದ ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಮುನೇಗೌಡ ರೈತರ ಪರ ಮಾತನಾಡಲು ಬಂದಾಗ ಅವರನ್ನೂ ವಶಕ್ಕೆ ಪಡೆಯಲಾಯಿತು.