ಬೆಂಗಳೂರು:ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ,ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಖಾತರಿ ಕಾನೂನು ಜಾರಿಗಾಗಿ ಒತ್ತಾಯಿಸಿ ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ರೈತರ ರಾಷ್ಟ್ರೀಯ ಮಹಾಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಭಾರತ ರಾಜ್ಯಗಳ ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಕುರುಬೂರು ಶಾಂತಕುಮಾರ್ ಹೇಳಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ, ಪ್ರವಾಹ, ಮಳೆಹಾನಿ, ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ಎಲ್ಲ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಕೃಷಿ ಸಾಲ ಪಡೆದ ರೈತರು ಬೆಳೆ ಬೆಳೆಯಲು ಹೂಡಿಕೆ ಮಾಡಿದ್ದು, ಬೆಳೆ ನಾಶವಾಗಿದೆ, ಈಗ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದಕ್ಕಾಗಿ ಸಾಲಮನ್ನಾ ಆಗಲೇಬೇಕು ಎಂದು ಒತ್ತಾಯಿಸಿದರು.
ಕೈಗಾರಿಕೆ, ಉದ್ಯಮಿಗಳಿಗೆ ಸಂಕಷ್ಟದ ನೆರವು ಎಂದು 12 ಲಕ್ಷ ಕೋಟಿ ಮನ್ನಾ ಮಾಡಿರುವ ಕೇಂದ್ರ ಸರ್ಕಾರ, ಅದೇ ರೀತಿ ರೈತರ ಸಾಲ ಮನ್ನಾ ಆಗಬೇಕು. ಈ ಬಗ್ಗೆ ರೈತರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಡಿ.23 ರಂದು ಕೋರಿಕೆ ಪತ್ರ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಸಾಲ ನವೀಕರಣ:ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ದಿಕ್ಕು ತಪ್ಪಿಸಬಾರದು. ರೈತರು ಸಾಲ ಮನ್ನಾ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರೈತರ ಸಾಲ ಮನ್ನಾ ಆಗದಂತೆ ವಂಚಿಸಲು ಬ್ಯಾಂಕ್ ಅಧಿಕಾರಿಗಳು ಬಡ್ಡಿ ದುಪ್ಪಟ್ಟು ಆಗುತ್ತದೆ ಎಂದು ಹೆದರಿಸಿ ಖಾಲಿ ಪತ್ರಕ್ಕೆ ಸಹಿ ಪಡೆದು ಸಾಲ ನವೀಕರಣ ಮಾಡುತ್ತಿದ್ದಾರೆ. ಈ ಬಗ್ಗೆ ರೈತರು ಜಾಗೃತರಾಗಿರಬೇಕು ಎಂದು ಎಚ್ಚರಿಸಿದರು.
ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ:ಪ್ರಕೃತಿ ಮುನಿಸಿನಿಂದ ಭತ್ತ, ಕಬ್ಬು, ತೊಗರಿ, ಜೋಳ ರಾಗಿ ಉತ್ಪಾದನೆ ಶೇಕಡಾ 50ರಷ್ಟು ಕಡಿಮೆ ಆಗಿರುವ ಕಾರಣ ಹೊರದೇಶಕ್ಕೆ ಹೋಗುವ ಆಹಾರ ಧಾನ್ಯಗಳನ್ನು ರಫ್ತು ನಿಷೇಧ ಮಾಡಲಾಗಿದೆ. ಈಗಲಾದರೂ ರೈತರ ಶಕ್ತಿ, ಶ್ರಮದ ಬಗ್ಗೆ ಸರ್ಕಾರಗಳು ವಿಶೇಷ ಕಾಳಜಿ ವಹಿಸಲಿ. ಸರ್ಕಾರ ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಮಾಡಬೇಕು. ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಪ್ರಧಾನಿಯವರು ರೈತರಿಗೆ ಭರವಸೆ ನೀಡಿದಂತೆ ಕೂಡಲೇ ಈ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.