ಬೆಂಗಳೂರು:ಬೆಳೆ ನಷ್ಟ ಮತ್ತು ಕಿಸಾನ್ ಸಮ್ಮಾನ್ ಯೋಜನೆ ಹಣವನ್ನು ಬ್ಯಾಂಕ್, ಸಾಲದ ಬಾಕಿಗೆ ಜಮೆ ಮಾಡಿಕೊಳ್ಳುತ್ತಿರುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಭರವಸೆ ನೀಡಿದ್ದಾರೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪರಿಹಾರ ಮೊತ್ತ ಸಾಲಕ್ಕೆ ಜಮೆ ಮಾಡುವ ಬ್ಯಾಂಕ್ಗಳ ವಿರುದ್ದ ಕ್ರಮ: ಬೊಮ್ಮಾಯಿ - Farmers Meet CM
ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡಲಾಗಿರುವ ಪರಿಹಾರ ಮೊತ್ತವನ್ನು ಬ್ಯಾಂಕ್ಗಳು ಬಾಕಿ ಸಾಲಕ್ಕೆ ಜಮೆ ಮಾಡುತ್ತಿರುವ ಬಗ್ಗೆ ರೈತರು ದೂರು ನೀಡಿದ್ದು, ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿ, ಉತ್ತರ ಕರ್ನಾಟಕ, ಮಂಡ್ಯ, ಮೈಸೂರು, ರಾಯಚೂರು, ಕೊಪ್ಪಳ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು ಬಂದಿದ್ದರು. ಎರಡು ನಿಯೋಗದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪ್ರವಾಹದಿಂದ ಆಗಿರುವ ಹಾನಿ ಮತ್ತು ರೈತರಿಗೆ ಉಂಟಾಗಿರುವ ಸಂಕಷ್ಟವನ್ನು ವಿವರಿಸಿದ್ದಾರೆ. ಈಗಾಗಲೇ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ವಿವರವಾದ ವಿಚಾರವನ್ನು ರೈತರಿಗೆ ಹೇಳಿದ್ದಾರೆ. ರೈತರ ಬೆಳೆ ನಷ್ಟ ಪರಿಹಾರ ಯಾವ ಮಾನದಂಡದಲ್ಲಿ ನೀಡಲಾಗುತ್ತಿದೆ ಎನ್ನುವ ಮಾಹಿತಿ ನೀಡಿದ್ದಾರೆ. ಕೆಲ ಬ್ಯಾಂಕ್ಗಳು ಬೆಳೆ ನಷ್ಟ ಮತ್ತು ಕಿಸಾನ್ ಸಮ್ಮಾನ್ ಯೋಜನೆ ಹಣವನ್ನು ಸಾಲದ ಬಾಕಿಗೆ ಜಮೆ ಮಾಡಿಕೊಳ್ಳುತ್ತಿರುವ ಬಗ್ಗೆ ರೈತರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದರು.
ಬೆಳಗಾವಿ ಮತ್ತು ಮಂಡ್ಯ ಕಬ್ಬುಬೆಳೆಗಾರರ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳು ಈಗಾಗಲೇ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿ ಪರಿಹಾರ ಕೊಡುವ ಕೆಲಸವನ್ನು ಮಾಡಿದ್ದಾರೆ. ಕೇಂದ್ರ ಸರ್ಕಾರದ ತಂಡ ನಾಳೆ ಮತ್ತೆ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದು, ಕೇಂದ್ರದ ನೆರವನ್ನು ಪಡೆಯುವ ಪ್ರಯತ್ನವನ್ನು ಕೂಡ ಸಿಎಂ ಈ ವೇಳೆ ಮಾಡಲಿದ್ದಾರೆ ಎಂದು ಹೇಳಿದರು.