ಬೆಂಗಳೂರು: ಮಹದಾಯಿ ನೀರಿಗಾಗಿ ಮೂರನೇ ದಿನ ಧರಣಿ ಉತ್ತರ ಕರ್ನಾಟಕ ಭಾಗದ ರೈತರನ್ನು ಡಿಸಿಎಂ ಗೋವಿಂದ ಕಾರಜೋಳ ಭೇಟಿಯಾದರು. ಈ ವೇಳೆ ಹೋರಾಟ ಕೈಬಿಟ್ಟು ಊರಿಗೆ ತೆರಳುವಂತೆ ಮನವಿ ಮಾಡಿದರು.
ಡಿಸಿಎಂ ಕಾರಜೋಳ ಮಾತನಾಡಿ, ನಾವು ಈಗಾಗಲೇ ಪ್ರಧಾನ ಮಂತ್ರಿಗಳಿಗೂ ಸಹ ಈ ಕುರಿತು ಮನವಿ ಮಾಡಿದ್ದೇವೆ. ಯಡಿಯೂರಪ್ಪನವರು ಕೂಡ ಈ ಕುರಿತು ಗೋವಾ ಹಾಗೂ ಮಹಾರಾಷ್ಟ್ರ ಸಿಎಂಗಳಿಗೆ ವಿನಂತಿಸಿದ್ದಾರೆ. ಈ ಕೂಡಲೇ ಗೆಜೆಟ್ ನೋಟಿಫಿಕೇಶನ್ ಆಗಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಾಕಷ್ಟು ಪ್ರಯತ್ನಿಸುತ್ತಿದ್ದೇವೆ. ಖಂಡಿತವಾಗಿಯೂ ಸಮಸ್ಯೆ ಬಗೆಹರಿಸುತ್ತೇವೆ. ಮಹಾದಾಯಿ ಹೋರಾಟಗಾರರು ತಮ್ಮ ಧರಣಿಯನ್ನು ಹಿಂಪಡೆದು, ತಮ್ಮ ಊರುಗಳಿಗೆ ಮರಳಬೇಕೆಂದು ವಿನಂತಿಸಿದರು.
ಬಳಿಕ ಮಾತನಾಡಿದ ರೈತ ಮುಖಂಡ ವೀರೇಶ್ ಸೊರಬದಮಠ, ಇಲ್ಲಿ ಡಿಸಿಎಂ ಅವರು ಬಂದಿದ್ದಕ್ಕೆ ನಾವು ಹೋರಾಟ ಹಿಂಪಡೆಯಬೇಕು ಎಂದು ಹೇಳಿದವರು ಯಾರು? ಈ ರಾಜ್ಯದ ಮುಖ್ಯಮಂತ್ರಿಗಳು ಬಂದರೂ ನಮ್ಮ ನಿಲುವು ರಾಜ್ಯಪಾಲರಿಗೆ ಮನವಿ ಕೊಡುವುದು. ನಮಗೆ ಬಂದ ಸೂಚನೆ ಪ್ರಕಾರ, ರಾಜ್ಯಪಾಲರು ಭೇಟಿ ಮಾಡಲು, ಮನವಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರಾಜ್ಯಪಾಲರು ನಮ್ಮ ಮನವಿ ಸ್ವೀಕರಿಸದಿದ್ದರೂ ನಾವು ಗೌರವವಾಗಿ ಮನವಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡಿ ವಾಪಾಸ್ ತೆರಳುತ್ತೇವೆ. ಆದರೆ ಅಲ್ಲಿಯವರೆಗೂ ನಾವು ನಮ್ಮ ಧರಣಿ ಹಿಂಪಡೆಯಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.