ಕರ್ನಾಟಕ

karnataka

ETV Bharat / state

ಕೃಷಿ ಕಾಯ್ದೆ ಮೂಲಕ ರೈತರಿಗೆ ಸ್ವಾಭಿಮಾನದ ಬದುಕು ಸಿಕ್ಕಿದೆ: ಶಾಸಕ ರಾಜೀವ್​ - Yediyurappa

ಜನಸಂಘದ ಕಾಲದಿಂದ ನಮ್ಮದಾಗಿದ್ದ ಚಿಂತನೆಗಳನ್ನು ಅಧಿಕಾರ ಸಿಕ್ಕಿದ ಸಂದರ್ಭದಲ್ಲಿ ನಾವು ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಜಗತ್ತು ಭಾರತದ ಕಡೆ ತಿರುಗಿ ನೋಡುತ್ತಿದೆ. ಬಡ ಕುಟುಂಬಗಳು ಆರ್ಥಿಕ ಸ್ವಾವಲಂಬನೆಯನ್ನು ಪಡೆಯುವತ್ತ ನಡೆಯುತ್ತಿವೆ- ಶಾಸಕ ರಾಜೀವ್‌

MLA Rajeev
ಶಾಸಕ ರಾಜೀವ್​

By

Published : Jul 29, 2021, 5:19 PM IST

ಬೆಂಗಳೂರು:ಕೃಷಿ ಕಾಯ್ದೆ ಜಾರಿ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಸರ್ಕಾರ ರೈತರಿಗೆ ಸ್ವಾಭಿಮಾನದ ಜೀವನ ಕೊಟ್ಟಿದೆ. ಕೇವಲ ದಲ್ಲಾಳಿಗಳ ಏಕಸ್ವಾಮ್ಯಕ್ಕೆ ಒಳಪಟ್ಟಿದ್ದ ಕೃಷಿ ಮಾರುಕಟ್ಟೆಗಳ ಸಂಕೋಲೆ ಬಿಡುಗಡೆಯಾಗಿದ್ದು, ದೇಶದ ಯಾವುದೇ ಮೂಲೆಯ ವ್ಯಾಪಾರಿಗೆ ಉತ್ಪನ್ನ ಮಾರಾಟ ಮಾಡುವ ಸ್ವಾತಂತ್ರ್ಯ ರೈತರಿಗೆ ಸಿಕ್ಕಿದೆ ಎಂದು ಶಾಸಕ ಪಿ.ರಾಜೀವ್ ಅಭಿಪ್ರಾಯಪಟ್ಟರು.

ಮಲ್ಲೇಶ್ವರದ ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪಕ್ಷದ ರಾಜ್ಯ ಮಟ್ಟದ ‘ಇ ಚಿಂತನ ವರ್ಗದಲ್ಲಿ ಬಡವರ ಕಲ್ಯಾಣಕ್ಕಾಗಿ ಸಂಕಲ್ಪ ಮತ್ತು ಆ ದಿಸೆಯಲ್ಲಿ ನಮ್ಮ ಪ್ರಯತ್ನಗಳು’ ಸಂವಾದದಲ್ಲಿ ಮಾತನಾಡಿದ ಅವರು, 1970ರ ದಶಕದಲ್ಲಿ ಇಂದಿರಾ ಗಾಂಧಿ ಅವರು ಗರೀಬಿ ಹಠಾವೋ ಘೋಷಣೆ ಮಾಡಿದರು. ಆ ಘೋಷಣೆ ಮೂಲಕ ಹಲವು ಚುನಾವಣೆಗಳನ್ನು ಕಾಂಗ್ರೆಸ್ ಪಕ್ಷವು ಗೆದ್ದಿತು. ಆದರೆ, ಬಡವರ ಅಭಿವೃದ್ಧಿ ಆಗಲೇ ಇಲ್ಲ. ಬಡವರು ಮತ್ತಷ್ಟು ಹೀನಾಯ ಸ್ಥಿತಿಗೆ ಹೋದರು ಎಂದು ವಾಗ್ದಾಳಿ ನಡೆಸಿದರು.

‘ಪಾಲಿಸಿ ಪೆರಾಲಿಸಿಸ್’ನಿಂದ ದೇಶ ಬಳಲುತ್ತಿತ್ತು

ಡಿಜಿಟಲ್ ಇಂಡಿಯಾ ಮೂಲಕ ಜನ್‍ಧನ್ ಯೋಜನೆಯಡಿ 50 ಕೋಟಿ ಬ್ಯಾಂಕ್ ಖಾತೆಗಳನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ತೆರೆಯಲಾಗಿದೆ. ಕೇಂದ್ರ ಸರ್ಕಾರದ 52 ಸಚಿವಾಲಯಗಳು ಬಿಡುಗಡೆ ಮಾಡುವ 380 ಯೋಜನೆಗಳು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಜನರನ್ನು ತಲುಪುತ್ತಿವೆ. ಇಲ್ಲಿನವರೆಗೆ 17 ಲಕ್ಷ ಕೋಟಿ ರೂಪಾಯಿ ಜನಸಾಮಾನ್ಯರ ಖಾತೆಗೆ ಸಂದಾಯವಾಗಿವೆ. ಕಾಂಗ್ರೆಸ್ ಆಡಳಿತವೇ ಈಗ ಇರುತ್ತಿದ್ದರೆ 17 ಲಕ್ಷ ಕೋಟಿ ಪೈಕಿ 13.5 ಲಕ್ಷ ಕೋಟಿ ಮಧ್ಯವರ್ತಿಗಳ ಪಾಲಾಗುತ್ತಿತ್ತು. 3.5 ಲಕ್ಷ ಕೋಟಿ ಮಾತ್ರ ಬಡವರಿಗೆ ಸಿಗುತ್ತಿತ್ತು ಎಂದರು.

ಹಲವು ದಶಕಗಳ ಕಾಲ ಕಾಂಗ್ರೆಸ್ ಆಡಳಿತದ ‘ಪಾಲಿಸಿ ಪೆರಾಲಿಸಿಸ್’ ನಿಂದ ದೇಶ ಬಳಲುತ್ತಿತ್ತು. ಸ್ವಾತಂತ್ರ್ಯ ಪಡೆದ 70 ವರ್ಷಗಳ ಬಳಿಕವೂ 18 ಸಾವಿರ ಹಳ್ಳಿಗಳು ವಿದ್ಯುತ್ ಸಂಪರ್ಕ ಪಡೆದಿರಲಿಲ್ಲ. ನರೇಂದ್ರ ಮೋದಿ ಅವರ ಸರ್ಕಾರವು ಕೇವಲ 5 ವರ್ಷಗಳಲ್ಲಿ ಸೌಭಾಗ್ಯ ಯೋಜನೆಯಡಿ 2,81,69,724 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಲಕ್ಷಾಂತರ ಮನೆಗಳು ಕರ್ನಾಟಕದಲ್ಲೂ ಇದರ ಪ್ರಯೋಜನ ಪಡೆದಿವೆ ಎಂದು ತಿಳಿಸಿದರು.

ಕಾಂಗ್ರೆಸ್ ಯೋಜನೆ ವಿರುದ್ಧ ಕಿಡಿ

50- 60 ವರ್ಷಗಳ ಕಾಲ ಚುನಾವಣೆ ವೇಳೆ ‘ಹರ್ ಘರ್ ಬಿಜಲಿ, ಹರ್ ಘರ್ ಪಾನಿ’ ಘೋಷಣೆಯನ್ನು ಕಾಂಗ್ರೆಸ್ ಮೊಳಗಿಸುತ್ತಿತ್ತು. ಅದು ಘೋಷಣೆಯಾಗಿಯೇ ಉಳಿಯಿತು. ಆದರೆ, ಜಲಜೀವನ ಮಿಷನ್ ಮೂಲಕ ಮನೆಮನೆಗೂ ಶುದ್ಧ ನೀರು ನೀಡುವ ಪ್ರಧಾನಿಯವರ ಆಲೋಚನೆ ಕಾರ್ಯಗತವಾಗಿದೆ. ಈ ಎಲ್ಲ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸಬೇಕು. ಬಡ ಕುಟುಂಬ ಆರ್ಥಿಕ ಸ್ವಾವಲಂಬಿ ಆಗಬೇಕು ಎಂಬ ನಿರ್ಧಾರ ಬಿಜೆಪಿಯದು. ‘ರೋಟಿ ಕಪಡಾ ಮಕಾನ್’ ಸುಮಾರು ಅರ್ಧ ಶತಮಾನದ ಕಾಲ ಕಾಂಗ್ರೆಸ್‍ನ ಚುನಾವಣಾ ಪ್ರಣಾಳಿಕೆ ಆಗಿತ್ತು.

ಅದರಿಂದ ಜನಸಾಮಾನ್ಯರಿಗೆ ಪ್ರಯೋಜನ ಆಗಲೇ ಇಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಯೋಜನೆಗಳನ್ನಷ್ಟೇ ಘೋಷಿಸಲಿಲ್ಲ. ‘ಒಂದು ದೇಶ- ಒಂದು ಪಡಿತರ ಚೀಟಿ’ಯ ಯೋಜನೆಯಡಿ ಇಂಥ ಬಡವರ ಪರ, ಮಹತ್ವಪೂರ್ಣ ನಿರ್ಧಾರ ಇರುವುದನ್ನು ನಾವು ಕಾಣಬಹುದು ಎಂದು ವಿಶ್ಲೇಷಿಸಿದರು.

ಜನಸಂಘದ ಕಾಲದಿಂದ ನಮ್ಮದಾಗಿದ್ದ ಚಿಂತನೆಗಳನ್ನು ಅಧಿಕಾರ ಸಿಕ್ಕಿದ ಸಂದರ್ಭದಲ್ಲಿ ನಾವು ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ದೇಶದ ಬಡವರೂ ವಿಮಾನದಲ್ಲಿ ಓಡಾಡುವಂತಾಗಬೇಕೆಂಬ ಕಲ್ಪನೆಯಿಂದ ಉಡಾನ್​ ಯೋಜನೆ ಜಾರಿಗೊಂಡಿದೆ. ಭಾರತ ಬದಲಾಗುತ್ತಿದೆ. ಜಗತ್ತು ಭಾರತದ ಕಡೆ ತಿರುಗಿ ನೋಡುತ್ತಿದೆ. ಬಡ ಕುಟುಂಬಗಳು ಆರ್ಥಿಕ ಸ್ವಾವಲಂಬನೆಯನ್ನು ಪಡೆಯುವತ್ತ ನಡೆಯುತ್ತಿವೆ. ಇದಕ್ಕೆ ನರೇಂದ್ರ ಮೋದಿ ಕಾರಣ ಎಂದರು.

ABOUT THE AUTHOR

...view details