ಬೆಂಗಳೂರು: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆಕೊಟ್ಟಿರುವ ಡಿಸೆಂಬರ್ 8ರ ಭಾರತ ಬಂದ್ಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ. ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಬಂದ್ನಲ್ಲಿ ಭಾಗವಹಿಸುವುದಲ್ಲದೆ ಪ್ರತಿಯೊಬ್ಬ ನಾಗರಿಕರೂ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ಕೊಟ್ಟಿದ್ದಾರೆ.
ರಾಜಧಾನಿಯಲ್ಲಿ ಲಕ್ಷಾಂತರ ರೈತರು ಕೊರೆಯುವ ಚಳಿ, ಪೊಲೀಸರ ದೌರ್ಜನ್ಯ ಮತ್ತು ಬಿಜೆಪಿ ಕಿಡಿಗೇಡಿಗಳ ಅಪಪ್ರಚಾರಕ್ಕೆ ಎದೆಗೊಟ್ಟು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ನಮಗಾಗಿ ಹೋರಾಟ ನಡೆಸುತ್ತಿರುವ ಅನ್ನದಾತರ ಬೆಂಬಲಕ್ಕೆ ನಿಲ್ಲುವುದು ಅನ್ನ ತಿನ್ನುವ ನಮ್ಮೆಲ್ಲ ಕರ್ತವ್ಯವಾಗಿದೆ. ಕೊರೊನಾ ವೈರಸ್ ದಾಳಿಯಿಂದ ತಾವು ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ ದಿವಾಳಿಯಾಗಿ ನರಳುತ್ತಿರುವ ನಮ್ಮ ರೈತ ಬಂಧುಗಳು ‘ನಮ್ಮನ್ನು ರಕ್ಷಿಸಿ, ಉಳಿಸಿ’ ಎಂದು ಗೋಗರೆಯುತ್ತಿರುವಾಗ, ಕೇಂದ್ರ ಸರ್ಕಾರ ಕೃಷಿ ವಿರೋಧಿ ಕಾಯ್ದೆಗಳನ್ನು ಅವಸರದಲ್ಲಿ ಜಾರಿಗೊಳಿಸಿ ಅವರ ಗಾಯದ ಮೇಲೆ ಬರೆ ಎಳೆದು ನಿಧಾನವಾಗಿ ಸಾಯಿಸಲು ಹೊರಟಿದೆ ಎಂದಿದ್ದಾರೆ.
ಭಾರತ್ ಬಂದ್ ಬೆಂಬಲಿಸಿ ಇಂದು ಕಾಂಗ್ರೆಸ್ ನಾಯಕರ ಸಾಂಕೇತಿಕ ಪ್ರತಿಭಟನೆ
ಖಾಸಗಿ ಕಂಪನಿಗಳ ತಾಳಕ್ಕೆ ಕೇಂದ್ರ ಸರ್ಕಾರ ಕುಣಿಯತೊಡಗಿದೆ. ಈ ಸಂಚಿನ ಭಾಗವಾಗಿಯೇ ಎಪಿಎಂಸಿ ಹೊಂದಿರುವ ನಿಯಂತ್ರಣವನ್ನು ಕಿತ್ತು ಹಾಕಿ ಖಾಸಗಿಯವರಿಗೆ ಅನಿಯಂತ್ರಿತವಾದ ಮುಕ್ತ ಹಸ್ತ ನೀಡುವ ದುರುದ್ದೇಶದಿಂದ ಈ ಕಾಯ್ದೆ ತರಲಾಗಿದೆ. ಈ ಬಗ್ಗೆ ನಮ್ಮ ರೈತರು ಜಾಗೃತರಾಗಬೇಕಾಗಿದೆ. ರೈತ ಸಂಘಟನೆಗಳ ಜೊತೆ ಕೇಂದ್ರ ಸರ್ಕಾರ ಹಲವು ಸುತ್ತಿನ ಮಾತುಕತೆ ನಡೆಸಿದರೂ ಕನಿಷ್ಠ ಬೆಂಬಲ ಬೆಲೆಯ ಒಂದು ಅಂಶವನ್ನು ಕಾನೂನಿನಲ್ಲಿ ಅಳವಡಿಸಬೇಕೆಂಬ ಸಣ್ಣ ಬೇಡಿಕೆಯನ್ನು ಒಪ್ಪದಿರುವ ಕೇಂದ್ರ ಸರ್ಕಾರದ ದುರುದ್ದೇಶ ಸ್ಪಷ್ಟವಾಗಿದೆ. ಇದು ಕಾರ್ಪೊರೇಟ್ ಧಣಿಗಳ ಗುಲಾಮಿ ಸರ್ಕಾರ ಎಂದು ಪ್ರಕಟಣೆಯಲ್ಲಿ ಆಪಾದಿಸಿದ್ದಾರೆ.