ಬೆಂಗಳೂರು:ರೈತರು ದೇಶದ ಬೆನ್ನೆಲುಬು. ಸಮಾಜದ ಹಸಿವು ನೀಗಿಸುವುದು ಅನ್ನದಾತ. ಆದರೆ ಅನ್ನ ನೀಡುವ ಅನ್ನದಾತನೇ ನೇಣಿಗೆ ಕೊರಳೊಡ್ಡುವ ಸರಣಿ ಮಾತ್ರ ರಾಜ್ಯದಲ್ಲಿ ಮುಂದುವರಿದಿದೆ.
ನಮ್ಮ ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಗೆ ಸಿಲುಕಿ ಸಾಲದ ಸುಳಿಯಿಂದ ಹೊರಬರಲಾರದೆ ಅನ್ನದಾತರು ನೇಣಿನ ಪಾಶಕ್ಕೆ ಕೊರಳೊಡ್ಡುವುದು ಮುಂದುವರೆದಿದೆ. ದುರಂತವೆಂದರೆ ರಾಜ್ಯದಲ್ಲಿ ಕಳೆದ ಬಾರಿಗಿಂತ ಈ ಬಾರಿ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಏರಿಕೆ ಕಂಡಿದೆ. ಅದರ ಎಕ್ಸ್ಕ್ಲೂಸಿವ್ ರಿಪೋರ್ಟ್ ಇಲ್ಲಿದೆ.
ರಾಜ್ಯದಲ್ಲಿ ಏರಿಕೆ ಕಂಡ ರೈತರ ಆತ್ಮಹತ್ಯೆ ಸಾಲಮನ್ನಾ, ಬೆಳೆ ವಿಮೆ ಆಸರೆ ಇದ್ದರೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ರಾಜ್ಯದಲ್ಲಿ ನಿರಂತರವಾಗಿ ಅತಿವೃಷ್ಟಿ, ಅನಾವೃಷ್ಟಿಯ ಸಂಕಷ್ಟ ಎದುರಾಗ್ತಾನೆ ಇದೆ. ಇದರ ಹೊಡೆತಕ್ಕೆ ಸಿಲುಕಿ ನಮ್ಮ ರಾಜ್ಯದ ಅನ್ನದಾತ ನರಳಾಡುತ್ತಿದ್ದಾನೆ. ಬೆವರು ಸುರಿಸಿ ಬೆಳೆದ ಬೆಳೆ ಕೈ ಕೊಟ್ಟಾಗ ರೈತ ಸಾಲದ ಶೂಲಕ್ಕೀಡಾಗುತ್ತಾನೆ. ಸಾಲದ ಸುಳಿಗೆ ಸಿಲುಕಿ ಜೀವನವೇ ಬೇಡವೆನಿಸಿದ ರೈತ ನೇಣಿಗೆ ಕೊರಳೊಡ್ಡುತ್ತಿದ್ದಾನೆ.
ರೈತ ನಮ್ಮ ಜೀವಾಳ ಎಂದು ಪ್ರತಿ ಸರ್ಕಾರಗಳು ಭಾಷಣ ಬಿಗಿಯುತ್ತವೆ. ಆದರೆ ರೈತರ ಕಷ್ಟಗಳಿಗೆ ಮಾತ್ರ ಕಿವಿಗೊಡುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ನಮ್ಮ ಅನ್ನದಾತರ ಆತ್ಮಹತ್ಯೆ ಸರಣಿ ಮಾತ್ರ ಮುಂದುವರಿಯುತ್ತಿದೆ.
2018-19ರಲ್ಲಿ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಇಳಿಕೆ ಕಂಡಿದ್ದು ನೆಮ್ಮದಿಯ ಉಸಿರು ಬಿಡುವಂತಾಗಿತ್ತು. ಈಟಿವಿ ಭಾರತ್ಗೆ ಸಿಕ್ಕಿದ ಅಂಕಿ-ಅಂಶದಂತೆ 2019-20ರಲ್ಲಿ ರೈತರ ಆತ್ಮಹತ್ಯೆ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡಿರುವುದು ಆತಂಕ ಹುಟ್ಟಿಸಿದೆ.
ಮತ್ತೆ ಏರಿಕೆ ಕಂಡ ರೈತರ ಆತ್ಮಹತ್ಯೆ ಪ್ರಮಾಣ:
ನಮ್ಮ ರಾಜ್ಯದ ಅನ್ನದಾತ ಕಣ್ಣೀರಿನಲ್ಲೇ ಕೈ ತೊಳೆಯುವಂತಾಗಿದ್ದು, ತನ್ನ ಜೀವದ ಮೇಲಿನ ಆಸೆಯನ್ನೇ ಕಳೆದುಕೊಳ್ಳುತ್ತಿದ್ದಾನೆ. 2019-2020ನೇ ಸಾಲಿನಲ್ಲಿ ನಮ್ಮ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಮತ್ತೆ ಏರಿಕೆ ಕಂಡಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯ ಮಧ್ಯೆ ಸಿಲುಕಿ ಅನ್ನದಾತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ.
ರಾಜ್ಯದಲ್ಲಿ 2019-20 ಸಾಲಿನಲ್ಲಿ ಒಟ್ಟು 908 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 122 ಪ್ರಕರಣಗಳನ್ನು ವೈಯಕ್ತಿಕ ಕಾರಣಗಳಿಂದ ಮಾಡಿಕೊಂಡಿರುವ ಆತ್ಮಹತ್ಯೆ ಎಂಬುದನ್ನ ತಿರಸ್ಕರಿಸಲಾಗಿದೆ. ಇನ್ನು ಸುಮಾರು 660 ಆತ್ಮಹತ್ಯೆ ಪ್ರಕರಣಗಳನ್ನು ಅರ್ಹ ಪ್ರಕರಣ ಎಂದು ಇದುವರೆಗೆ ದೃಢೀಕರಿಸಲಾಗಿದೆ. ಇನ್ನೂ 127 ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಉಳಿದಂತೆ 42 ರೈತರ ಆತ್ಮಹತ್ಯೆ ಪ್ರಕರಣಗಳನ್ನು ಎಫ್ಎಸ್ಎಲ್ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಆ ಮೂಲಕ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಮತ್ತೆ ಏರಿಕೆ ಕಂಡಿರುವುದು ಮತ್ತೆ ಆತಂಕ ಮೂಡಿಸಿದೆ.
ಯಾವ ಭಾಗದಲ್ಲಿ ಅತಿ ಹೆಚ್ಚು ಆತ್ಮಹತ್ಯೆ?:
- ಮುಂಬೈ-ಕರ್ನಾಟಕ ಭಾಗ:ಬೆಳಗಾವಿ- 94, ವಿಜಯಪುರ- 43, ಬಾಗಲಕೋಟೆ- 28, ಹಾವೇರಿ- 76, ಧಾರವಾಡ- 60, ಗದಗ- 25, ಒಟ್ಟು-326
- ಕಲ್ಯಾಣ ಕರ್ನಾಟಕ ಭಾಗ: ಬೀದರ್- 46, ಕಲಬುರ್ಗಿ- 58, ರಾಯಚೂರು- 22, ಬಳ್ಳಾರಿ- 35, ಕೊಪ್ಪಳ-23, ಯಾದಗಿರಿ- 20, ಒಟ್ಟು- 204
- ಕಾವೇರಿ ನದಿಪಾತ್ರ:ಮಂಡ್ಯ- 63, ಮೈಸೂರು- 60, ಹಾಸನ-33, ಚಾಮರಾಜನಗರ-1, ರಾಮನಗರ-5, ಕೊಡಗು- 9, ಒಟ್ಟು-171
- ಇತರೆ ಜಿಲ್ಲೆಯಲ್ಲಿನ ಆತ್ಮಹತ್ಯೆ: ಶಿವಮೊಗ್ಗ- 42, ಚಿಕ್ಕಮಗಳೂರು-41, ಚಿತ್ರದುರ್ಗ-40, ದಾವಣಗೆರೆ-36, ತುಮಕೂರು-31, ಒಟ್ಟು-190
ಕಳೆದ ನಾಲ್ಕು ವರ್ಷದ ಆತ್ಮಹತ್ಯೆ ಪ್ರಕರಣ:
2016-17ರಲ್ಲಿ ರಾಜ್ಯದಲ್ಲಿ 925 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನು2017-18ರಲ್ಲಿ ರೈತರ ಆತ್ಮಹತ್ಯೆ ಪ್ರಮಾಣ 1,050ಗೆ ಏರಿಕೆಯಾಗಿತ್ತು. ಅದೇ 2018-19ರಲ್ಲಿ ರೈತರ ಆತ್ಮಹತ್ಯೆ ಪ್ರಕರಣ 700ಕ್ಕೆ ಇಳಿಕೆ ಕಂಡಿದ್ದರಿಂದ ಸರ್ಕಾರ ನಿಟ್ಟುಸಿರು ಬಿಟ್ಟಿತ್ತು. ಆದರೆ 2019-20ರಲ್ಲಿ ಮತ್ತೆ ರೈತರ ಆತ್ಮಹತ್ಯೆ ಪ್ರಕರದಲ್ಲಿ ಏರಿಕೆ ಕಂಡಿದ್ದು, ಸುಮಾರು 908 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಈಗಾಗಲೇ ದೃಢೀಕರಿಸುವ ಮತ್ತು ತೀರ್ಮಾನಿಸಲು ಬಾಕಿ ಇರುವ ಪ್ರಕರಣಗಳು ಸೇರಿ ಒಟ್ಟು 787 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.