ಬೆಂಗಳೂರು:ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಸಾಲದ ಶೂಲ, ಅತಿವೃಷ್ಟಿ, ಬೆಲೆ ಕುಸಿತದಿಂದ ನೊಂದು ಹಲವು ರೈತರು ನೇಣಿಗೆ ಕೊರಳೊಡ್ಡುತ್ತಿದ್ದಾರೆ. ಕಳೆದ ಮೂರು ವರ್ಷಗಳ ಆತ್ಮಹತ್ಯೆ ಪ್ರಕರಣಗಳ ಸ್ಥಿತಿಗತಿ ನೋಡೋಣ.
ಮೂರು ವರ್ಷಗಳಲ್ಲಿ ನೇಣಿಗೆ ಕೊರಳೊಡ್ಡಿದ ರೈತರೆಷ್ಟು?:2019-2020 ಸಾಲಿನಲ್ಲಿ ರಾಜ್ಯದಲ್ಲಿ 1091 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಅದೇ 2020-21ರಲ್ಲಿ 851 ರೈತರು ಆತ್ಮಹತ್ಯೆಗೆ ಶರಣಾಗಿದ್ದರೆ, 2021-22ನೇ ಸಾಲಿನಲ್ಲಿ 859 ಅನ್ನದಾತರು ನೇಣಿಕೆ ಕೊರಳೊಡ್ಡಿದ್ದಾರೆ ಎಂದು ಕೃಷಿ ಇಲಾಖೆ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರ ನೀಡಿದೆ.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 2,801 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದೆ. 2019-20ನೇ ಸಾಲಿನಲ್ಲಿ ವರದಿಯಾದ ಒಟ್ಟು 1091 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಉಪವಿಭಾಗ ಮಟ್ಟದ ಸಮಿತಿ ಸಭೆಯಲ್ಲಿ 196 ಪ್ರಕರಣಗಳು ತಿರಸ್ಕೃತಗೊಂಡಿವೆ. 895 ಪ್ರಕರಣಗಳು ಅರ್ಹ ಪ್ರಕರಣಗಳೆಂದು ತೀರ್ಮಾನಿಸಲಾಗಿದ್ದು, 895 ಅರ್ಹ ಪ್ರಕರಣಗಳಿಗೆ ಪರಿಹಾರ ಧನವನ್ನು ವಿತರಿಸಲಾಗಿದೆ ಎಂದು ತಿಳಿಸಿದೆ.
ಇತ್ತ, 2020-21ರ ಸಾಲಿನಲ್ಲಿ ವರದಿಯಾದ ಒಟ್ಟು 851 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಉಪವಿಭಾಗ ಮಟ್ಟದ ಸಮಿತಿ ಸಭೆಯಲ್ಲಿ 132 ಪ್ರಕರಣಗಳು ತಿರಸ್ಕೃತಗೊಂಡಿವೆ. 716 ಪ್ರಕರಣಗಳು ಅರ್ಹ ಪ್ರಕರಣಗಳೆಂದು ಪರಿಗಣಿಸಲಾಗಿದೆ.