ಬೆಂಗಳೂರು:ಇತ್ತೀಚೆಗೆ ಗದಗ ಮೂಲದ ರೈತನೋರ್ವನಿಗೆ ಬೆಂಗಳೂರಿನ ಎಪಿಎಂಸಿ ಮಾರ್ಕೆಟ್‌ನಲ್ಲಿ 205 ಕೆ.ಜಿ. ಈರುಳ್ಳಿಗೆ ಕೇವಲ 8 ರೂಪಾಯಿ ನೀಡಿರುವ ಬಗ್ಗೆ ವರದಿಯಾಗಿತ್ತು. ಈ ಮೂಲಕ ಎಪಿಎಂಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಬಯಲಾಗಿತ್ತು. ಈ ಪ್ರಕರಣದ ಬೆನ್ನಲ್ಲೇ ಮತ್ತದೇ ರೀತಿಯಲ್ಲಿ ರೈತನಿಗೆ ಮೋಸವಾಗಿರುವುದು ಬೆಳಕಿಗೆ ಬಂದಿದೆ.
ಕೋಲಾರದ ಶ್ರೀನಿವಾಸಪುರ ಮೂಲದ ಆನಂದ್ ಎಂಬ ರೈತ ತನ್ನ ಜಮೀನಿನಲ್ಲಿ ಬೆಳೆದಿದ್ದ ಗಡ್ಡೆಕೋಸಿಗೆ 1 ಚೀಲಕ್ಕೆ 50 ಕೆಜಿ ಎಂಬಂತೆ 316 ಚೀಲಕ್ಕೆ 70 ಸಾವಿರ ಕೊಡುವುದಕ್ಕೆ ಬದಲಾಗಿ ಕೇವಲ 600 ರೂಪಾಯಿ ನೀಡಿ ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ.
ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ ಕಮಿಷನ್ ಏಜೆಂಟ್ ಅರುಣ್ ಎಂಬುವರ ವಿರುದ್ಧ ರೈತ ಆನಂದ್ ಕಲಾಸಿಪಾಳ್ಯ ಪೊಲೀಸ್ ಠಾಣೆ, ಬಿಬಿಎಂಪಿ ಹಾಗೂ ತೋಟಗಾರಿಕಾ ಇಲಾಖೆಗೆ ದೂರು ನೀಡಿದ್ದಾರೆ.
ಒಂದು ಕೆ.ಜಿ ಗಡ್ಡೆಕೋಸಿಗೆ 6 ರೂಪಾಯಿ ಕೊಡುವುದಾಗಿ ನಂಬಿಸಿ ಖರೀದಿ ಮಾಡಿ ಮೂಟೆಗೆ 2 ರೂಪಾಯಿ ಕೊಟ್ಟ ಕೈ ತೊಳೆದುಕೊಂಡಿದ್ದಾನೆ. ತಾನು ಬೆಳೆದ 316 ಮೂಟೆ ಕೋಸಿಗೆ 70 ಸಾವಿರ ಬರುತ್ತೆ ಅಂತ ಕನಸು ಕಂಡಿದ್ದ ಆನಂದ ಅವರ ಕೈಗೆ ಸಿಕ್ಕಿರುವುದು ಕೇವಲ 600 ರೂಪಾಯಿ.