ಕರ್ನಾಟಕ

karnataka

ETV Bharat / state

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.26ರಂದು 'ವಿಧಾನಸೌಧ ಚಲೋ': ಕುರುಬೂರು ಶಾಂತಕುಮಾರ್

ವಿದ್ಯುತ್ ಖಾಸಗೀಕರಣ ವಿರೋಧಿಸಿ, ಕಬ್ಬು ದರ ನಿಗದಿಗೆ ಒತ್ತಾಯಿಸಿ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಸೆ.26ರಂದು ಕೆಎಸ್​ಆರ್​​​​ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೂ ಬೃಹತ್​ ಪ್ರತಿಭಟನಾ ರ‍್ಯಾಲಿ ನಡೆಯಲಿದೆ.

Vidhana Soudha Chalo by farmer organizations
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್

By

Published : Sep 24, 2022, 9:47 AM IST

ಬೆಂಗಳೂರು:ನಗರದಲ್ಲಿ ಸೆ.25ರಂದು ರೈತ ಮುಖಂಡರ ರಾಷ್ಟ್ರೀಯ ಅಧಿವೇಶನ, ಸೆ.26 ರಂದು ರೈತರ ಬೃಹತ್ 'ವಿಧಾನಸೌಧ ಚಲೋ' ರ‍್ಯಾಲಿ ನಡೆಯಲಿದೆ. ಅಲ್ಲಿ ವಿದ್ಯುತ್ ಕಾಯ್ದೆ ತಿದ್ದುಪಡಿ ಮಾಡಿ ಖಾಸಗೀಕರಣ ಮಾಡುವುದನ್ನು ವಿರೋಧಿಸಲು ಹಾಗೂ ನ್ಯಾಯ ಸಮ್ಮತ ಕಬ್ಬು ದರ ನಿಗದಿಗೆ ಒತ್ತಾಯಿಸಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ನಗರದ ಪ್ರೆಸ್ ಕ್ಲಬ್​​ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂರು ಕೃಷಿ ಕಾಯ್ದೆಗಳನ್ನು ರದ್ದುಮಾಡಿ ಎಂಎಸ್​ಪಿ ಗ್ಯಾರಂಟಿ ಕಾನೂನು ಜಾರಿ ಮಾಡುತ್ತೇವೆ. ಹೋರಾಟದಲ್ಲಿ ಮಡಿದ 750 ರೈತ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ 2021ರ ನವೆಂಬರ್​​ ತಿಂಗಳಲ್ಲಿ ಭರವಸೆ ನೀಡಿದ್ದ ಪ್ರಧಾನಿ ಮೋದಿ ಭರವಸೆ ಹುಸಿಗೊಳಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡಲು ಸಮಿತಿ ರಚಿಸಿದ್ದೇವೆ ಎಂದು ವರ್ಷಗಳ ಕಾಲ ಹೋರಾಟ ಮಾಡಿದ ರೈತ ಮುಖಂಡರ ಹೊರಗಿಟ್ಟು ಸಮಿತಿ ರಚಿಸಿ ನಾಟಕವಾಡುತ್ತಿದ್ದಾರೆ ಎಂದು ದೂರಿದರು.

ರಾಷ್ಟ್ರೀಯ ಮುಖಂಡರ ಕಿಸಾನ್ ಅಧಿವೇಶನ:ಸಮಿತಿ ರಚನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ತಿರಸ್ಕರಿಸಿದೆ. ದೇಶಾದ್ಯಂತ ರೈತ ಚಳವಳಿಯನ್ನು ಮತ್ತಷ್ಟು ಪ್ರಬಲಗೊಳಿಸಲು ದಕ್ಷಿಣ ಭಾರತದ ರಾಜ್ಯಗಳ ಕೇಂದ್ರ ಬಿಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಮುಖಂಡರ ಕಿಸಾನ್ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಭಾರತ ರಾಜ್ಯಗಳ ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕರೂ ಆಗಿರುವ ಕುರುಬೂರು ಶಾಂತಕುಮಾರ್ ತಿಳಿಸಿದರು.

ರೈತರ ಬೇಡಿಕೆಗಳೇನು?:

1)ಎಂಎಸ್​​ಪಿ ಖಾತರಿ ಕಾನೂನು ಜಾರಿ:

  • ಎಲ್ಲ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಎಂಎಸ್​ಪಿ ಖಾತರಿ ಕಾನೂನು ಜಾರಿಗೆ ತರಬೇಕು.
  • ಡಾ ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು.
  • 2022ರ ವಿದ್ಯುತ್ ಕಾಯ್ದೆ ತಿದ್ದುಪಡಿ ಖಾಸಗಿಕರಣ ಕೈಬಿಡಬೇಕು.
  • ಕಬ್ಬಿನ ಎಫ್​​ಆರ್​​ಪಿ ದರ ಪುನರ್ ಪರಿಶೀಲನೆ ನಡೆಸಿ ವೈಜ್ಞಾನಿಕವಾಗಿ ನ್ಯಾಯಯುತ ಕಬ್ಬಿನ ದರ ನಿಗದಿ ಮಾಡಬೇಕು.

2)ಜಿಎಸ್​ಟಿ ರದ್ದು:

  • ಕೃಷಿ ಉತ್ಪನ್ನಗಳ, ಹಾಗೂ ಉಪಕರಣಗಳ ಮೇಲಿನ ಜಿಎಸ್​ಟಿ ರದ್ದುಪಡಿಸಬೇಕು.
  • ದೇಶದಲ್ಲಿ ಮೂರುವರೆ ಲಕ್ಷ ರೈತರು ಕೃಷಿ ಸಂಕಷ್ಟದಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ಕೋವಿಡ್​​ ಲಾಕ್​​ಡೌನ್​​ ಸಂಕಷ್ಟದಿಂದ ನಲುಗಿದ್ದಾರೆ. ಆದಕಾರಣ ದೇಶದ ಉದ್ಯಮಿಗಳ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ರೀತಿಯಲ್ಲಿ, ರೈತರ ಸಾಲ ಮನ್ನಾ ಮಾಡಬೇಕು.
  • ಫಸಲ್ ಭೀಮಾ ಬೆಳೆ ವಿಮೆ ಯೋಜನೆ ಮಾನದಂಡ ಬದಲಾಯಿಸಬೇಕು.

3)ವಿಶ್ವ ವ್ಯಾಪಾರ ಒಪ್ಪಂದ:

  • ವಿಶ್ವ ವ್ಯಾಪಾರ ಒಪ್ಪಂದ ಡಬ್ಲ್ಯೂಟಿಒ ನಿಂದ ಭಾರತ ಸರ್ಕಾರ ಹೊರ ಬರಬೇಕು.
  • ಲಖೀಂಪುರ ಖೇರಿ ಪ್ರಕರಣದಲ್ಲಿ ಭಾಗಿಯಾಗಿರುವ ಕೇಂದ್ರದ ಸಚಿವ ಅಜಯ್ ಕುಮಾರ್ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಡಬೇಕು.
  • ದೆಹಲಿ ಹೋರಾಟದಲ್ಲಿ ಮಡಿದ 750 ರೈತ ಕುಟುಂಬಗಳಿಗ ಕೇಂದ್ರ ಸರ್ಕಾರ ನವೆಂಬರ್​​ ತಿಂಗಳಲ್ಲಿ ಮೂರು ಕೃಷಿ ಕಾಯ್ದೆ ರದ್ದು ಮಾಡಿದಾಗ ನೀಡಿದ್ದ ಭರವಸೆಯಂತೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಬೇಕು.

4) ಎಪಿಎಂಸಿ ತಿದ್ದುಪಡಿ ಕಾಯ್ದೆ:

  • ದೆಹಲಿ ಹೋರಾಟದಲ್ಲಿ ರೈತರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು, ರಾಜ್ಯದಲ್ಲಿ ಜಾರಿ ಮಾಡಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು.

10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಳೆ ಹಾನಿ:ರಾಜ್ಯದಲ್ಲಿ ಅಂದಾಜು 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಳೆ ಹಾನಿಯಿಂದ ರೈತರ ಬೆಳೆ ನಷ್ಟ ಆಗಿದೆ. ಅಧಿಕಾರಿಗಳು ಕಾಟಾಚಾರದ ಸಮೀಕ್ಷೆ ನಡೆಸುತ್ತಿದ್ದಾರೆ. ನೈಜ ನಷ್ಟ ಪರಿಹಾರ ನೀಡಲು ಮುಂದಾಗಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿ ತಾಲೂಕಿಗೂ ಭೇಟಿ ನೀಡಿ ಪರಿಶೀಲಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಬೇಕು. ಈ ಎಲ್ಲ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಿ ದೇಶಾದ್ಯಂತ ಹೋರಾಟ ನಡೆಸಲು ಅಧಿವೇಶನದಲ್ಲಿ ತೀರ್ಮಾನಿಸಲಾಗುವುದು ಎಂದು ಶಾಂತಕುಮಾರ್ ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ, ಹರೀಶ್ ಅದ್ದೆ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಬರಡನಪುರ ನಾಗರಾಜ್, ಗೋವಿಂದರಾಜ್ ಮುಂತಾದ ಮುಖಂಡರು ಮಾಧ್ಯಮಗೋಷ್ಟಿಯಲ್ಲಿದ್ದರು.

ಇದನ್ನೂ ಓದಿ:ದೆಹಲಿ ಮಾದರಿ ಹೋರಾಟಕ್ಕೆ ಸಜ್ಜಾಗುತ್ತಿರುವ ರಾಜ್ಯದ ರೈತರು: ಸೆ. 26ಕ್ಕೆ ವಿಧಾನಸೌಧ ಚಲೋ

ABOUT THE AUTHOR

...view details