ಬೆಂಗಳೂರು: ರೇವಣ್ಣ ಬಹಳ ಕುತಂತ್ರಿ. ಕುತಂತ್ರಿ ಕೆಲಸ ಮಾಡ್ತಾ ರಾಜಕೀಯ ಮಾಡ್ತಿದ್ದಾರೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕಿಡಿಕಾರಿದ್ದಾರೆ.
ಜೆಡಿಎಸ್ ಬೆಂಬಲದೊಂದಿಗೆ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್ನಲ್ಲಿ ಪಾಸ್ ಆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರೇವಣ್ಣ ಬೆಳಗ್ಗೆ ನಮ್ಮ ಜೊತೆ ಪ್ರತಿಭಟನೆಗೆ ಬರ್ತಾರೆ, ಮಧ್ಯಾಹ್ನ ಸದನಕ್ಕೆ ಹೋಗಿ ವಿಧೇಯಕಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಈಗಾಗ್ಲೆ ಮಂಡ್ಯದಲ್ಲಿ ಜೆಡಿಎಸ್ಗೆ ಜನ ಬುದ್ಧಿ ಕಲಿಸಿದ್ದಾರೆ. ರೈತ ವಿರೋಧಿ ಕೆಲಸ ಮಾಡಿದ್ರೆ ಏನಾಗುತ್ತೆ ಅನ್ನೋದನ್ನು ರೈತರು ಮುಂದಿನ ದಿನಗಳಲ್ಲಿ ತೋರಿಸುತ್ತಾರೆ ಎಂದರು.
ಇದನ್ನೂ ಓದಿ : ಸರ್ಕಾರದ ಕೈ ಹಿಡಿದ ಜೆಡಿಎಸ್: ಭೂ ಸುಧಾರಣಾ ಕಾಯ್ದೆ ಪಾಸ್
ಯಡಿಯೂರಪ್ಪ ರೈತರ ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದ್ದರು. ಈಗ ರೈತರಿಗೆ ದ್ರೋಹ ಮಾಡಿದ್ದಾರೆ. ಇದಕ್ಕೆ ರೈತರು ಬುದ್ಧಿ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೌರ್ಯ ವೃತದಲ್ಲಿ ನಮ್ಮ ಧರಣಿ ಮುಂದುವರೆಯುತ್ತದೆ. ಡಿಸೆಂಬರ್ 10ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ. ಈ ಮೂಲಕ ಸರ್ಕಾರವನ್ನು ಎಚ್ಚರಿಸಲಿದ್ದೇವೆ. 10 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಹಸಿರುಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಪ್ರತಿಕ್ರಿಯಿಸಿ, ಯಡಿಯೂರಪ್ಪ ಹಾಗೂ ಮಂತ್ರಿ ಮಂಡಲದ ಸದಸ್ಯರು ಈ ವಿಷಯದಲ್ಲಿ ಕಿಕ್ ಬ್ಯಾಕ್ ಪಡೆದಿರುವ ವಿಚಾರ ಸತ್ಯ ಅನ್ನೋದನ್ನು ಇದು ಸಾರಿ ಹೇಳ್ತಿದೆ. ಯಡಿಯೂರಪ್ಪ ರೈತ ಕುಟುಂಬದಿಂದ ಬಂದು ರೈತರಿಗೆ ವಿಷವುಣಿಸುವ ಕೆಲಸ ಮಾಡಿದ್ದಾರೆ. ಮಣ್ಣಿನ ಮಕ್ಕಳು ಎಂದು ಹೇಳುವವರು ರೈತರು ನೇಣು ಹಾಕಿಕೊಳ್ಳುವಂತಹ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.