ಹೊಸಪೇಟೆ: ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಖಂಡಿಸಿ ವಿವಿಧ ಸಂಘಟನೆಯವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿರುದ್ಧ ಘೋಷಣೆ ಕೂಗಿದರು.
ಕುಷ್ಟಗಿ(ಕೊಪ್ಪಳ): ಕರ್ನಾಟಕ ಬಂದ್ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ ಮುಂಗಟ್ಟು ಬಂದ್ ಆಗಿದ್ದವು, ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ಕೆಲವರು ಅಂಗಡಿ ತೆರೆಯಲು ಪ್ರಯತ್ನಿಸಿದರೂ ಪ್ರತಿಭಟನಾಕಾರರು ಬಲವಂತವಾಗಿ ಬಂದ್ ಮಾಡಿಸಿದರು. ರೈತ ಸಂಘಟನೆಗಳು, ಕನ್ನಡಪರ ಸಂಘಟನೆ ಹಾಗೂ ಕಾಂಗ್ರೆಸ್, ಜೆಡಿಎಸ್, ಸಿಪಿಐ (ಎಂ) ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಜಾಥಾದಲ್ಲಿ ಪಾಲ್ಗೊಂಡರು.
ಹಾಸನ/ಅರಸೀಕೆರೆ/ಬೇಲೂರು: ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಮತ್ತು ಸಿಐಟಿಯು ವತಿಯಿಂದ ಹಾಸನದಲ್ಲಿ ಪ್ರತಿಭಟನೆ ನಡೆಸಿದ ಬೆನ್ನಲ್ಲಿಯೇ ಅರಸೀಕೆರೆ ಮತ್ತು ಬೇಲೂರು ತಾಲೂಕಿನಲ್ಲಿಯೂ ಪ್ರತಿಭಟನೆ ನಡೆಯಿತು. ಅರಸೀಕೆರೆಯ ಹೊರವಲಯದಲ್ಲಿರುವ ಶಾಯಿ ಗಾರ್ಮೆಂಟ್ಸ್ ಫ್ಯಾಕ್ಟರಿಯನ್ನು ಎಂದಿನಂತೆ ತರಲಾಗಿತ್ತು. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕಾರ್ಮಿಕ ವಿರೋಧಿ ನಿತಿನ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ನಾವು ಪ್ರತಿಭಟನೆ ಮಾಡುತ್ತಿದ್ದರೆ ನೀವು ಕಾರ್ಮಿಕರನ್ನು ಬರಮಾಡಿಕೊಂಡು ಕೆಲಸ ಮಾಡುತ್ತಿರುವುದು ಎಷ್ಟು ಸರಿ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಗಾರ್ಮೆಂಟ್ಸ್ ಮುಂದೆ ಪ್ರತಿಭಟನೆ ಮಾಡಿದರು.
ವಿಜಯಪುರ:ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವು ರೈತ ಕಾನೂನು ಮಸೂದೆ ಜಾರಿ ಖಂಡಿಸಿ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಸಿದರು. ನಗರದ ಸಿದ್ದೇಶ್ವರ ಮಂದಿರ ಮುಂಭಾಗದಲ್ಲಿ ರೈತ ಸಂಘಟನೆಗಳಿಂದ ಎತ್ತುಗಳಿಂಗೆ ಪೂಜೆ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.
ಮುದ್ದೇಬಿಹಾಳ : ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರೈತ ಸಂಘಟನೆಗಳು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಬಾಲಕನೊಬ್ಬ ಪಾಲ್ಗೊಂಡು ಗಮನ ಸೆಳೆದಿದ್ದಾನೆ. ಬಿದರಕುಂದಿಯ ಹಸನ್ ಶೆಖ್ ಎಂಬಾತ ಉರಿಬಿಸಿಲನ್ನೂ ಲೆಕ್ಕಿಸದೇ ಪ್ರತಿಭಟನೆಗೆ ಬೆಂಬಲ ಸೂಚಿಸಿದ.
ಭಾಗಲಕೋಟೆ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧ ಮಸೂದೆ ಖಂಡಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷ ಹಾಗೂ ಕರವೇ ಸಂಘಟನೆಯವರು ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.