ಬೆಂಗಳೂರು:ಚೀನಾದ ಹಾಂಗ್ಜೋನಲ್ಲಿ ನಡೆಯಲಿರುವ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡದ ಆಟಗಾರರಿಗೆ 'ಸುನೆಹ್ರಾ ಸಫರ್ - ರೋಡ್ ಟು ಹಾಂಗ್ಜೋ ಏಷ್ಯನ್ ಗೇಮ್ಸ್' ಎಂಬ ಹೆಸರಿನ ಕಾರ್ಯಕ್ರಮದ ಮೂಲಕ ವಿಶೇಷ ಬೀಳ್ಕೊಡುಗೆ ನೀಡಿದ ಹಾಕಿ ಇಂಡಿಯಾ ಫೆಡರೇಶನ್, ಆಟಗಾರರ ಪೋಷಕರು, ಕುಟುಂಬ ಸದಸ್ಯರನ್ನು ಸನ್ಮಾನಿಸಿತು. ಪ್ರತಿಷ್ಠಿತ ಟೂರ್ನಿಗಾಗಿ ಹಾಕಿ ತಂಡಗಳು ವಹಿಸಿದ ಶ್ರಮ, ತಯಾರಿಯನ್ನು ಹಾಕಿ ಇಂಡಿಯಾ ಫೆಡರೇಶನ್ ವಿಶೇಷವಾಗಿ ಸ್ಮರಿಸಿದ್ದು, ಆಟಗಾರರನ್ನು ಹುರಿದುಂಬಿಸಿದೆ.
ಕಾರ್ಯಕ್ರಮದಲ್ಲಿ ಒಡಿಶಾ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ, ಕ್ರೀಡೆ ಮತ್ತು ಯುವಜನ ಸೇವೆಗಳು ಹಾಗೂ ಗೃಹ ಖಾತೆಯ ಸಚಿವ ತುಷಾರಕಾಂತಿ ಬೆಹೆರಾ, ಹಾಕಿ ಇಂಡಿಯಾ ಅಧ್ಯಕ್ಷ ಡಾ.ದಿಲೀಪ್ ಟಿರ್ಕಿ, ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಭೋಲಾನಾಥ್ ಸಿಂಗ್, ಹಾಕಿ ಇಂಡಿಯಾದ ಕಾರ್ಯನಿರ್ವಾಹಕ ಸದಸ್ಯರು, ಮಾಜಿ ಆಟಗಾರರು ಮತ್ತು ಟೂರ್ನಿಯಲ್ಲಿ ಕಾರ್ಯನಿರ್ವಹಿಸಲಿರುವ ಭಾರತದ ತಾಂತ್ರಿಕ ಅಧಿಕಾರಿಗಳು, ಅಂಪೈರ್‌ಗಳು ಇದ್ದರು.
ತುಷಾರಕಾಂತಿ ಬೆಹೆರಾ ಮಾತನಾಡಿ, “ಹಾಕಿ ತಂಡಗಳಿಗೆ ಬೀಳ್ಕೊಡುಗೆ ನೀಡಲು ಇಲ್ಲಿಗೆ ಬಂದಿರುವುದು ತುಂಬಾ ಸಂತೋಷವಾಗಿದೆ. ಪುರುಷರ ಮತ್ತು ಮಹಿಳಾ ತಂಡಗಳ ಇತ್ತೀಚಿನ ಯಶಸ್ಸನ್ನು ಹತ್ತಿರದಿಂದ ನೋಡಿದ ನಂತರ, ಖಂಡಿತವಾಗಿಯೂ ಅವರು ಪ್ರಶಸ್ತಿಗಳನ್ನು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ" ಎಂದರು.
ಹಾಕಿ ಇಂಡಿಯಾ ಅಧ್ಯಕ್ಷ ಡಾ.ದಿಲೀಪ್ ಟಿರ್ಕಿ ಮಾತನಾಡಿ, "ಸುನೆಹ್ರಾ ಸಫರ್ ಕಾರ್ಯಕ್ರಮವು ಭಾರತದಿಂದ ಚೀನಾದ ಹಾಂಗ್ಜೋಗೆ ತಂಡದ ಪ್ರಯಾಣವನ್ನು ಸೂಚಿಸುತ್ತದೆ. ಮಾತ್ರವಲ್ಲ, ಇದು ತಮ್ಮ ಕುಟುಂಬಗಳಿಂದ ದೂರವಿದ್ದು ಕಠಿಣ ಪರಿಶ್ರಮವಹಿಸಿದ ಆಟಗಾರರ ಸಮರ್ಪಣೆ ಮತ್ತು ತ್ಯಾಗವನ್ನು ತೋರಿಸುತ್ತದೆ. ಈ ಚಾಂಪಿಯನ್‌ಗಳನ್ನು ಬೆಳೆಸುವುದರ ಹಿಂದಿರುವ ಅವರ ಕುಟುಂಬದ ಸದಸ್ಯರ ಪ್ರಯತ್ನವನ್ನು ಗೌರವಿಸುವ ಕ್ಷಣವಿದು" ಎಂದು ಹೇಳಿದರು.
ಪುರುಷರ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮಾತನಾಡಿ, "ಇದು ನಿಜವಾಗಿಯೂ ಅದ್ಭುತ ಕ್ಷಣ. ನನ್ನ ಕುಟುಂಬ ಈ ಸಂಭ್ರಮಾಚರಣೆಯ ಭಾಗವಾಗಿರುವುದು ಸ್ಮರಣೀಯ ಮತ್ತು ವಿಶೇಷವಾಗಿದೆ. ದೇಶಕ್ಕೆ ಪ್ರಶಸ್ತಿಗಳನ್ನು ತರಲು ಇದು ನಮ್ಮನ್ನು ಪ್ರೇರೇಪಿಸಿದೆ" ಎಂದು ತಿಳಿಸಿದರು.