ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಚಿತ್ರರಂಗ, ಸಾಹಿತ್ಯ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ಹೆಸರನ್ನು ಬೆಂಗಳೂರಿನ ರಸ್ತೆಗಳಿಗೆ ಇಡಲಾಗಿದೆ. ಹಾಗೆಯೇ ಇತ್ತೀಚೆಗೆ ನಿಧನರಾದ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ, ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಎಂ ಲೀಲಾವತಿಯವರ ಸಿನಿಮಾ ಮತ್ತು ಸಾಮಾಜಿಕ ಸೇವೆ ಪರಿಗಣಿಸಿ ನೆಲಮಂಗಲ - ಯಶವಂತಪುರ ಸಂಪರ್ಕಿಸುವ ರಸ್ತೆಗೆ ಅವರ ಹೆಸರನ್ನು ಇಡಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಬೆಂಗಳೂರಿನ ರಸ್ತೆಗಳಿಗೆ ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಪುನೀತ್ ರಾಜ್ಕುಮಾರ್, ಕುವೆಂಪು, ವಾಟಾಳ್ ನಾಗರಾಜ್ ಹೆಸರು ಇಡಲಾಗಿದೆ. ಅಂತೆಯೇ ಡಾ.ಎಂ ಲೀಲಾವತಿ ಅವರ ಹೆಸರನ್ನು ಬೆಂಗಳೂರಿನ ಒಂದು ರಸ್ತೆಗೆ ಇಡುವಂತೆ ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದವರು ಬಿಬಿಎಂಪಿ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಅವರ ಸಾಮಾಜಿಕ ಸೇವೆ ಪರಿಗಣಿಸಿ ನೆಲಮಂಗಲ - ಯಶವಂತಪುರ ಸಂಪರ್ಕಿಸುವ ರಸ್ತೆಗೆ ಲೀಲಾವತಿ ಹೆಸರನ್ನು ಇಡುವಂತೆ ಕೇಳಿಕೊಂಡಿದ್ದಾರೆ.
ಡಾ. ಲೀಲಾವತಿ ಬಗ್ಗೆ.. ಕನ್ನಡ ಚಲನಚಿತ್ರ ರಂಗದ ಅಭಿಜಾತ ಕಲಾವಿದೆ ಲೀಲಾವತಿ ಅವರು 2023ರ ಡಿಸೆಂಬರ್ 8 ರಂದು ವಯೋಸಹಜ ಕಾಯಿಲೆಯಿಂದ ನಿಧನರಾದರು. 1938ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ್ದರು. ಸುಬ್ಬಯ್ಯ ನಾಯ್ಡು ಕಂಪನಿಯಲ್ಲಿ ಕಲಾವಿದೆಯಾಗಿ ಪಾತ್ರಗಳನ್ನು ನಿರ್ವಹಿಸಿ ರಂಗಭೂಮಿ ಕಲಾವಿದೆಯಾಗಿ ಪರಿಪಕ್ವಗೊಂಡ ಇವರು, 1949ರಲ್ಲಿ ನಾಗಕನ್ನಿಕೆ ಚಿತ್ರದ ಸಖಿ ಪಾತ್ರದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದರು. ಮಾಂಗಲ್ಯ ಯೋಗ ಚಿತ್ರದ ಮೂಲಕ ನಾಯಕಿ ನಟಿಯಾಗಿ ಬೆಳ್ಳಿ ಪರದೆ ಮೇಲೆ ರಾರಾಜಿಸಿದ್ದರು. ಕಡು ಬಡತನದಲ್ಲೇ ಬೆಳೆದು ಸಾಧನೆ ಮಾಡಿದ ಸಾಧಕಿ ಇವರು.