ಅಭಿಮಾನಿ ಕುರಿ ಆಂಜನೇಯ ಉಡುಗೊರೆಯಾಗಿ ತಂದ ತನ್ನ ಟಗರುನೊಂದಿಗೆ ಬೆಂಗಳೂರು:ನಿನ್ನೆ ಸಿಎಂ ಸಿದ್ದರಾಮಯ್ಯಗೆ 76ನೇ ಜನ್ಮದಿನ ಹಿನ್ನೆಲೆ ಅಭಿಮಾನಿಯೊಬ್ಬ ಟಗರು ಗಿಫ್ಟ್ ಮಾಡಿದ್ದಾರೆ. ಬೆಂಗಳೂರು ಸರ್ಕಾರಿ ನಿವಾಸಕ್ಕೆ ಬಂದ ರಾಯಚೂರು ಮೂಲದ ಅಭಿಮಾನಿ ಸಿಎಂ ಜನ್ಮದಿನಕ್ಕೆ ಟಗರು ಗಿಫ್ಟ್ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಕುರಿ ಆಂಜನೇಯ ಎಂಬುವವರು ಟಗರನ್ನು ಕೊಡುಗೆಯಾಗಿ ನೀಡಿದ್ದಾರೆ.
ಸಿಎಂ ಸರ್ಕಾರಿ ನಿವಾಸಕ್ಕೆ ಟಗರು ತಂದ ಕುರಿ ಆಂಜನೇಯ, ಟಗರು ಜೊತೆ ಕಂಬಳಿಯನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಪ್ರತಿ ವರ್ಷ ಆಂಜನೇಯ ಸಿದ್ದರಾಮಯ್ಯಗೆ ಟಗರು ಗಿಫ್ಟ್ ನೀಡುತ್ತಾ ಬಂದಿದ್ದಾರೆ. ನಿನ್ನೆ ಸಿಎಂ ಸಿದ್ದರಾಮಯ್ಯ ತಮ್ಮ 76ನೇ ಜನ್ಮದಿನವನ್ನು ಆಚರಿಸಿದ್ದರು. ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ನಿನ್ನೆ ಸರಳವಾಗಿ ಜನ್ಮದಿನ ಆಚರಿಸಿಕೊಂಡಿದ್ದರು.
ದೆಹಲಿ ಭೇಟಿಯಲ್ಲಿದ್ದ ಕೈ ನಾಯಕರು ನಿನ್ನೆ ದೆಹಲಿಯಲ್ಲೇ ಸಿಎಂ ಸಿದ್ದರಾಮಯ್ಯರಿಗೆ ಶುಭ ಹಾರೈಸಿದ್ದರು. ಇತ್ತ ಪ್ರಧಾನಿ ಮೋದಿ ಕೂಡ ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯಗೆ ಜನ್ಮದಿನದ ಶುಭ ಕೋರಿದ್ದರು.
ಸಿದ್ದರಾಮಯ್ಯರಿಗಾಗಿ ಪೋಸ್ಟರ್, ಕಟೌಟ್: ಸಿಎಂ ಸಿದ್ದರಾಮಯ್ಯಗೆ ಯಾವ ಹಿರೋಗಳಿಗೂ ಕಮ್ಮಿ ಇಲ್ಲದಷ್ಟು ಕ್ರೇಜ್ ಇದೆ, ಅಭಿಮಾನಿಗಳು ಇದ್ದಾರೆ. ತಮ್ಮ ನೆಚ್ಚಿನ ಜನನಾಯಕನಿಗಾಗಿ ಜನ್ಮದಿನದ ಶುಭಕೋರಿ ಅಭಿಮಾನಿಗಳು ನಗರದ ವಿವಿಧೆಡೆ ಪೋಸ್ಟರ್, ಕಟೌಟ್ಗಳನ್ನು ಹಾಕಿದ್ದಾರೆ. ಇಂದು ಮುಂಜಾನೆ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸದಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.
ಧನ್ಯವಾದ ತಿಳಿಸಿದ ಮುಖ್ಯಮಂತ್ರಿ:ತಮ್ಮ ಹುಟ್ಟು ಹಬ್ಬಕ್ಕೆ ಶುಭಕೋರಿದವರಿಗೆ ಸಿಎಂ ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ. ''ನನ್ನ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಪ್ರಧಾನಿ ನರೇಂದ್ರ ಮೋದಿಯವರು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ತಮಿಳುನಾಡಿನ ಮುಖ್ಯಮಂತ್ರಿಗಳಾದ ಎಂ.ಕೆ ಸ್ಟಾಲಿನ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಸೇರಿದಂತೆ ಎಲ್ಲ ಗೆಳೆಯರು ಮತ್ತು ಹಿತೈಷಿಗಳಿಗೆ ಹೃದಯಪೂರ್ವಕ ಧನ್ಯವಾದಗಳು. ತಮ್ಮೆಲ್ಲರ ಅಕ್ಕರೆ, ಅಭಿಮಾನ, ಹಾರೈಕೆಗಳು ಸದಾ ನನ್ನ ಮೇಲಿರಲಿ'' ಎಂದು ಬರೆದುಕೊಂಡಿದ್ದಾರೆ.
ಸಿಎಂ ಭೇಟಿಗೆ ಮಾತೆ ಗಂಗಾಂಬಿಕೆ ದೇವಿಯನ್ನು ನಿರಾಕರಿಸುತ್ತಿರುವ ಪೊಲೀಸರು
ಮಾತೆ ಗಂಗಾಂಬಿಕೆ ದೇವಿಗಿಲ್ಲ ಸಿಎಂ ಭೇಟಿ:ಸಿಎಂ ಭೇಟಿಗೆ ಬಂದಿದ್ದ ಮಾತೆ ಗಂಗಾಂಬಿಕೆ ದೇವಿಯರನ್ನು ಪೊಲೀಸರು ಗೃಹ ಕಚೇರಿ ಕೃಷ್ಣಾದ ಒಳಗೆ ಬಿಡದ ಘಟನೆ ನಡೆಯಿತು. ಬಸವ ಧರ್ಮದ ಪೀಠಾಧ್ಯಕ್ಷೆಯಾಗಿರುವ ಮಾತೆ ಗಂಗಾಂಬಿಕೆ, ಬಸವಧರ್ಮ ಪೀಠದ ಆಸ್ತಿ ವಿವಾದದಲ್ಲಿ ಸುದ್ದಿಯಾಗಿದ್ದರು. ಗಂಗಾಂಬಿಕೆ ದೇವಿ ಪೂರ್ವ ಅನುಮತಿ ಇಲ್ಲದೇ ಸಿಎಂ ಭೇಟಿ ಮಾಡಲು ಬಂದಿದ್ದರು. ಅನುಮತಿ ಪಡೆದಿಲ್ಲ ಅಂತ ಸಿಎಂ ಮನೆಗೆ ಪೊಲೀಸರು ಅವಕಾಶ ನೀಡಲಿಲ್ಲ.
ಬಸವ ಧರ್ಮ ಪೀಠದ ಬಗ್ಗೆ ಮಾತುಕತೆಗೆ ಬಂದಿದ್ದ ಮಾತೆ ಗಂಗಾಂಬಿಕೆ ದೇವಿ, ಅವಕಾಶ ಸಿಗದೇ ಬಳಿಕ ವಾಪಸ್ ಹೋದರು. ಸ್ವಲ್ಪ ಹೊತ್ತಿನ ನಂತರ ಮತ್ತೆ ಸಿಎಂ ನಿವಾಸಕ್ಕೆ ಅನುಮತಿಯೊಂದಿಗೆ ಒಳಗೆ ತೆರಳಿದರು. ಎರಡನೇ ಸಲ ಅನುಮತಿ ಪಡೆದಿದ್ದ ಹಿನ್ನೆಲೆಯಲ್ಲಿ ಸಿಎಂ ನಿವಾಸದ ಒಳ ಹೋಗಲು ಪೊಲೀಸರು ಬಿಟ್ಟರು.
ಇದನ್ನೂ ಓದಿ:ಶಿಕ್ಷಣಕ್ಕೆ ಸಿಎಸ್ಆರ್ ಫಂಡ್ ಆಕರ್ಷಿಸಲು ಸಮಾವೇಶ: ಕಾರ್ಪೋರೇಟ್ ಕಂಪನಿಗಳ ಜೊತೆ ಇಂದು ಸಿಎಂ ಸಂವಾದ