ಬೆಂಗಳೂರು: ಖ್ಯಾತ ಫುಟ್ಬಾಲ್ ಆಟಗಾರ ಧರ್ಮಲಿಂಗಂ ಯತಿರಾಜ್ (89) ಇಂದು ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಡಿ.ಯತಿರಾಜ್ 1948ರಿಂದ 1971ರವರೆಗೆ ಸುಬೇದಾರ್ ಆಗಿ ಸೇವೆ ಸಲ್ಲಿಸಿದ್ದರು. ನಂತರ 1972ರಿಂದ 1991ರವರೆಗೆ ಜೂನಿಯರ್ ಸ್ಪೋರ್ಟ್ಸ್ ಆಫೀಸರ್ ಆಗಿ ಬಿಇಎಲ್ನಲ್ಲಿ ನೇಮಕವಾಗಿದ್ದರು. ಅವರು ಸಿಕಂದ್ರಾಬಾದ್ ಇಎಂಇ-ಬಾಯ್ಸ್ನಲ್ಲಿ ಫುಟ್ಬಾಲ್ ಆಟಗಾರರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ ಬೆಂಗಳೂರಿನಲ್ಲಿ ಎಂಇಜಿ ಸೀನಿಯರ್ ತಂಡಕ್ಕೆ ಸೇರಿದರು.
1962ರಲ್ಲಿ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಪ್ರತಿನಿಧಿಸಲು ಅವರನ್ನು ಭಾರತೀಯ ತಂಡಕ್ಕೆ ಆಯ್ಕೆ ಮಾಡಲಾಯಿತು. ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕವನ್ನು ಗೆದ್ದ ತಂಡದಲ್ಲಿ ಸಕ್ರಿಯ ಸದಸ್ಯರಾಗಿದ್ದರು.
ಸಂತೋಷ್ ಟ್ರೋಫಿಯಲ್ಲಿ ರಾಜ್ಯವನ್ನು ಹಲವು ಬಾರಿ ಪ್ರತಿನಿಧಿಸಿದ್ದಾರೆ. ಡುರಾಂಡ್ ಕಪ್, ಸ್ಟಾಫರ್ಡ್ ಕಪ್, ರೋವರ್ಸ್ ಕಪ್ ಸೇರಿದಂತೆ ವಿವಿಧ ಪ್ರಸಿದ್ಧ ಟೂರ್ನಮೆಂಟ್‌ಗಳಲ್ಲಿ ಆಡಿದ್ದಾರೆ. ರಾಜ್ಯ ತಂಡದ ಆಯ್ಕೆದಾರರಾಗಿ ಮತ್ತು ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನ ಜಕಾರ್ತಾದ ಗೇಮ್ ಆಫ್ ಫುಟ್ಬಾಲ್ನಲ್ಲಿ ಚಿನ್ನದ ಪದಕಪಡೆದಿದ್ದಾರೆ. ಎಂಇಜಿ ಮತ್ತು ಕೇಂದ್ರವು ಫುಟ್ಬಾಲ್ ಕ್ರೀಡಾಂಗಣವನ್ನು ನಿರ್ಮಿಸಿ ಅವರ ಗೌರವಾರ್ಥ "ಡಿ.ಯತಿರಾಜ್ ಸ್ಟೇಡಿಯಂ" ಎಂದು ಹೆಸರಿಡಲಾಗಿದೆ.
ಕೆಎಸ್‌ಎಫ್‌ಎ-ಬಿಡಿಎಫ್‌ಎ ಅಧಿಕಾರಿಗಳು, ತೀರ್ಪುಗಾರರ ಸಮಿತಿ ಸದಸ್ಯರು ಯತಿರಾಜ್ ಅವರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿ ಗೌರವ ಸಲ್ಲಿಸಿದ್ದಾರೆ. ಹಲಸೂರು ಬಳಿಯ ಲಕ್ಷ್ಮಿಪುರಂ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.