ಬೆಂಗಳೂರು: ಒಂದೇ ಘಟನೆಗೆ ಸಂಬಂಧಿಸಿದಂತೆ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ವ್ಯಕ್ತಿಯೊಬ್ಬರ ವಿರುದ್ಧ ಮೂರು ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದ ಮತ್ತು ಈ ಪ್ರಕರಣಗಳ ವಿರುದ್ಧ ಹೋರಾಡಲು ಸಮಾಜ ಕಲ್ಯಾಣ ಇಲಾಖೆಯಿಂದ 3.5 ಲಕ್ಷ ರೂ.ಗಳನ್ನು ಪಡೆದ ಕಕ್ಷಿದಾರರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್, ದೂರುದಾರರಿಂದ ಹಣ ವಸೂಲಿ ಮಾಡುವಂತೆ ನಿರ್ದೇಶಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ತಮ್ಮ ತೀರ್ಪಿನಲ್ಲಿ, ಈ ಕಾರಣಕ್ಕಾಗಿಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ನಿಜವಾದ ದೌರ್ಜನ್ಯ ಪ್ರಕರಣಗಳು ಇಂಥ ಕ್ಷುಲ್ಲಕ ಪ್ರಕರಣಗಳಲ್ಲಿ ಕಳೆದುಹೋಗುತ್ತವೆ. ಕ್ಷುಲ್ಲಕ ಪ್ರಕರಣಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ನಿಜವಾದ ಪ್ರಕರಣವನ್ನು ಹುಡುಕುವುದು ಹುಲ್ಲಿನ ಹೊರೆಯಲ್ಲಿ ಸೂಜಿಯನ್ನು ಹುಡುಕುವಂತಾಗಿದೆ. ಹೆಚ್ಚಿನ ಪ್ರಕರಣಗಳು ಇದೇ ರೀತಿಯಲ್ಲಿ ಕಾನೂನು ಪ್ರಕ್ರಿಯೆಯ ದುರುಪಯೋಗದ ಪ್ರಕರಣಗಳಾಗಿವೆ ಎಂದು ಹೇಳಿದರು. ನಂತರ ಜಿಲ್ಲಾ ಕೇಂದ್ರ ಬಾಗಲಕೋಟೆಯ ಸೆಷನ್ಸ್ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣವನ್ನು ಅವರು ರದ್ದುಗೊಳಿಸಿದರು.
ಒಂದೇ ಘಟನೆಯ ಬಗ್ಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಇತರ ಎರಡು ಪ್ರಕರಣಗಳು ಸುಳ್ಳು ಎಂದು ಕಂಡುಬಂದ ನಂತರ ದೂರುದಾರರಿಂದ 1.5 ಲಕ್ಷ ರೂ.ಗಳನ್ನು ವಸೂಲಿ ಮಾಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕ್ಷುಲ್ಲಕ ಪ್ರಕರಣವನ್ನು ವಿಚಾರಣೆ ಮಾಡಲು ಸಾರ್ವಜನಿಕ ಖಜಾನೆಯಿಂದ ಹಣ ಪಾವತಿಸಲಾಗುವುದರಿಂದ, ದೂರುದಾರರಿಗೆ ಕಾನೂನು ಕ್ರಮ ಜರುಗಿಸಲು ನೀಡಲಾದ 1,50,000 ರೂ.ಗಳನ್ನು ರಾಜ್ಯ ಸರ್ಕಾರ ವಸೂಲಿ ಮಾಡುವುದು ಅವಶ್ಯಕವಾಗಿದೆ ಎಂದು ಅದು ಹೇಳಿದೆ.
ಇಂಥ ಪ್ರಕರಣಗಳಲ್ಲಿ ಯಾವುದೇ ಸಹಾಯ ನೀಡುವ ಮೊದಲು ರಾಜ್ಯ ಸರ್ಕಾರ ದಾಖಲೆಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಇದರಿಂದ ನಿಜವಾಗಿಯೂ ದೌರ್ಜನ್ಯಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರಿಗಾಗಿ ಹಣ ಖರ್ಚು ಮಾಡುವುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.