ಬೆಂಗಳೂರು: ಸಚಿವ ಡಿ ಸುಧಾಕರ್ ವಿರುದ್ಧದ ಪ್ರಕರಣ ಸುಳ್ಳು ಆರೋಪ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಡಿ ಸುಧಾಕರ್ ಮೇಲಿನ ಜಾತಿ ನಿಂದನೆ ದೂರು ಸಂಬಂಧ ಪ್ರತಿಕ್ರಿಯಿಸುತ್ತಾ, ಬಿಜೆಪಿಯವರು ಏನು ಬೇಕಾದರು ಕುತಂತ್ರ ಮಾಡಲಿ. ಇದೊಂದು ಸಿವಿಲ್ ಡಿಸ್ಪ್ಯುಟ್ ಆಗಿದೆ. ಪಕ್ಷದ ಅಧ್ಯಕ್ಷನಾಗಿ ಅದರ ಬಗ್ಗೆ ಸಂಪೂರ್ಣ ವರದಿ ಪಡೆದಿದ್ದೇನೆ. ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ ಎಂದರು.
ಅವರು ಜಮೀನನ್ನು ಖರೀದಿ ಮಾಡಿದ್ದಾರೆ. ಅನುಮತಿ ಪಡೆದು ಖಾಸಗಿ ಜಮೀನನ್ನು ಖರೀದಿ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಯಾರೋ ಹೋಗಿ ಕಾಂಪೌಂಡ್ ಹಾಕಿದ್ದಾರೆ. ಖರೀದಿ ಮಾಡಿದ ಜಾಗವನ್ನು ಅವರು ಇಲ್ಲದೇ ಇದ್ದಾಗ ಯಾರೋ ಹೋಗಿ ಅದನ್ನು ಸುಭದ್ರ ಮಾಡಲು ಯತ್ನಿಸಿದ್ದಾರೆ ಎಂದು ವಿವರಿಸಿದರು. ಅವರು ಇಲ್ಲದೇ ಹೋದಾಗ ಡಿ ಸುಧಾಕರ್ ವಿರುದ್ಧ ದೂರು ನೀಡಿದ್ದಾರೆ. ಪರಿಶಿಷ್ಟ ಜಾತಿಯವರು ದೂರು ಕೊಟ್ಟಾಗ ಅದನ್ನು ಸ್ವೀಕರಿಸುವ ಅನಿವಾರ್ಯತೆ ಇದೆ. ಇದು ಸುಳ್ಳು ಕೇಸ್ ಎಂಬುದು ನಮಗೆ ಗೊತ್ತಿದೆ. ನಾಳೆ ಬೆಳಗ್ಗೆ ಯಾರಾದರು ದೂರು ಕೊಡುತ್ತಾರೆ. ನನ್ನ ಮೇಲೂ ಕೊಡಬಹುದು. ದೂರು ಕೊಡುವ ಸಂದರ್ಭ ಡಿ ಸುಧಾಕರ್ ಎಲ್ಲಿದ್ದರು ಎಂಬ ಬಗ್ಗೆ ವಿಚಾರಿಸಿದ್ದೇವೆ. ಅದು ಸುಳ್ಳು ಕೇಸಾಗಿದೆ ಎಂದು ಡಿಕೆಶಿ ಸಮರ್ಥಿಸಿಕೊಂಡರು.
ಬಿಜೆಪಿ ಕನಸು ಕಾಣುವ ಅಗತ್ಯ ಇಲ್ಲ. ಸಚಿವ ಡಿ ಸುಧಾಕರ್ ರಾಜೀನಾಮೆ ಕೊಡ್ತಾರೆ ಎಂಬ ಕನಸು ಕಾಣುವ ಅಗತ್ಯ ಇಲ್ಲ. ಯಾರಾದರು ತಪ್ಪು ಮಾಡಿದರೆ, ಯಾರೂ ಕಾನೂನಿಗಿಂತ ದೊಡ್ಡವರಿಲ್ಲ. ಕಾನೂನಿಗಿಂತ ನಾನೂ ದೊಡ್ಡವನಲ್ಲ, ಡಿ.ಸುಧಾಕರೂ ಡೊಡ್ಡವರಲ್ಲ, ನೀವೂ ದೊಡ್ಡವರಲ್ಲ. ತಪ್ಪು ಮಾಡಿದರೆ ಕಾನೂನಿನಲ್ಲಿ ಏನು ಗೌರವ ಕೊಡಬೇಕು ಅದನ್ನು ಕೊಡುತ್ತಾರೆ ಎಂದರು.