ಬೆಂಗಳೂರು:ಯುವತಿಗಿದ್ದ ದೈವ ಭಕ್ತಿಯನ್ನೇ ದುರ್ಬಳಕೆ ಮಾಡಿಕೊಂಡು ದೋಷವಿರುವುದಾಗಿ ಸುಳ್ಳು ಹೇಳಿ ಪೂಜೆ ನೆಪದಲ್ಲಿ ತನ್ನ ಮನೆಗೆ ಕರೆಯಿಸಿ ಮತ್ತು ಬರುವ ಔಷಧಿ ನೀಡಿ ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ಎಸಗಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ನಕಲಿ ಸ್ವಾಮೀಜಿಯ ಹೀನಕೃತ್ಯಕ್ಕೆ ಪತ್ನಿಯೇ ಸಾಥ್ ನೀಡಿದ್ದಾಳೆ ಎನ್ನಲಾಗಿದೆ.
ಸಂತ್ರಸ್ತೆಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಆನಂದಮೂರ್ತಿ(ನಕಲಿ ಸ್ವಾಮೀಜಿ) ಹಾಗೂ ಪತ್ನಿ ಲತಾ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ ಹಾಗೂ ವಂಚನೆ ಪ್ರಕರಣ ದಾಖಲಿಸಿಕೊಂಡು ಆವಲಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಳೆದ ಐದಾರು ವರ್ಷಗಳ ಹಿಂದೆ ಸ್ನೇಹಿತೆಯ ಮನೆ ಕಾರ್ಯಕ್ರಮವೊಂದರಲ್ಲಿ ಸಂತ್ರಸ್ತೆಯನ್ನು ಆನಂದಮೂರ್ತಿ ಪರಿಚಯಿಸಿಕೊಂಡಿದ್ದ. ನಿಮ್ಮ ಜೀವನದಲ್ಲಿ ಗಂಡಾಂತರವಿದೆ. ಇದರಿಂದ ನಿಮ್ಮ ಕುಟುಂಬದ ಸದಸ್ಯರಿಗೂ ತೊಂದರೆಯಾಗಲಿದೆ, ಅದನ್ನು ನಿವಾರಿಸುವೆ ಎಂದು ಯುವತಿಗೆ ಬ್ರೈನ್ ವಾಶ್ ಮಾಡಿದ್ದನಂತೆ.
ಇದನ್ನು ನಂಬಿದ್ದ ಯುವತಿ ನಕಲಿ ಸ್ವಾಮೀಜಿ ಅಣತಿಯಂತೆ ಆತನ ಮನೆಗೆ ಹೋಗಿದ್ದಳು. ಪೂಜೆ ಮಾಡುವ ನೆಪದಲ್ಲಿ ಆಕೆಯನ್ನ ಕರೆಯಿಸಿಕೊಂಡು ಮತ್ತು ಬರುವ ಪಾನೀಯ ನೀಡಿದ್ದಾನೆ. ಮತ್ತೆ ಪ್ರಜ್ಞೆ ಬಂದಾಗ ಮನೆಯ ರೂಮ್ವೊಂದರಲ್ಲಿ ವಿವಸ್ತ್ರಳಾಗಿ ಇರುವುದು ಗೊತ್ತಾಗಿದೆ. ಆನಂದಮೂರ್ತಿ ಆತ್ಯಾಚಾರವೆಸಗಿದರೆ, ಆತನ ಪತ್ನಿ ಲತಾ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾಳೆ. ಯಾರಿಗಾದರೂ ವಿಷಯ ತಿಳಿಸಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದರಂತೆ.