ಬೆಂಗಳೂರು: ವಿವಿಧ ಪ್ರಕರಣಗಳಲ್ಲಿ ಭಾಗಿಯಾದವರ ಜಾಮೀನಿಗೆ ನಕಲಿ ಶ್ಯೂರಿಟಿ ನೀಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹಲಸೂರು ಗೇಟ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ಮೂಲದ ಪೆಮ್ಮಾರೆಡ್ಡಿ(65) ಬಂಧಿತ ಆರೋಪಿ. ನಗರದ ಹಲವಾರು ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಡಕಾಯಿತಿ, ಅತ್ಯಾಚಾರ ಹೀಗೆ ನಾನಾ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಂದ ಎರಡರಿಂದ ಮೂರು ಸಾವಿರ ರೂಪಾಯಿ ಹಣ ಪಡೆದು ಜಾಮೀನಿಗೆ ಶ್ಯೂರಿಟಿ ನೀಡುತ್ತಿದ್ದ.
ಎಂದಿನಂತೆ ಶುಕ್ರವಾರ ಶ್ಯೂರಿಟಿ ನೀಡಲು ನಗರದ ಸಿಟಿ ಸಿವಿಲ್ ಕೋರ್ಟಿಗೆ ಪೆಮ್ಮಾರೆಡ್ಡಿ ಬಂದ ವೇಳೆ ಖಚಿತ ಮಾಹಿತಿ ಆಧರಿಸಿ, ನ್ಯಾಯಾಲಯದ ಬಳಿ ಕರ್ತವ್ಯದಲ್ಲಿದ್ದ ಎಎಸ್ಐ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈತನ ವಿಚಾರಣೆ ನಡೆಸಿದಾಗ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಸುಮಾರು 50 ರಿಂದ 60 ಆರೋಪಿಗಳಿಗೆ ಶ್ಯೂರಿಟಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.
ಸದ್ಯ ಆರೋಪಿಯ ಡೈರಿ, ತಹಶೀಲ್ದಾರ್ ಕಚೇರಿಯ ನಕಲಿ ಸೀಲ್, ಜಮೀನು ದಾಖಲೆಗಳನ್ನು ವಶಕ್ಕೆ ಪಡೆದಿರುವ ಹಲಸೂರು ಗೇಟ್ ಠಾಣಾ ಪೊಲೀಸರು, ನಕಲಿ ಮುದ್ರೆ ಸೃಷ್ಟಿ, ವಂಚನೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.