ಬೆಂಗಳೂರು :ನಕಲಿ ಛಾಪಾ ಕಾಗದವನ್ನು ಅಸಲಿ ಎಂದು ನಂಬಿಸಿ ವಂಚಿಸುತ್ತಿದ್ದ ಗ್ಯಾಂಗ್ (scam gang arrest) ಅನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ವಿವೇಕನಗರದ ಹುಸೈನ್ ಬಾಬು, ಬಸವೇಶ್ವರ ನಗರದ ಹರೀಶ್, ನಯಾಜ್ ಅಹಮ್ಮದ್, ಸೀಮಾ, ಶಬ್ಬೀರ್ ಅಹಮ್ಮದ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ನಕಲಿ ಛಾಪಾ ಕಾಗದ ಹಗರಣ(Fake stamp paper scam)ವನ್ನು ಪತ್ತೆ ಹಚ್ಚುವಂತೆ ಕೆಲ ದಿನಗಳ ಹಿಂದೆ ನ್ಯಾಯಾಲಯ ಆದೇಶಿಸಿತ್ತು. ಇದರಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ (Police Commissioner Kamal Pant) ಅವರು ನಗರ ಪೂರ್ವ ವಿಭಾಗದ ಡಿಸಿಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದರು.
ಆಯುಕ್ತರ ಆದೇಶದಂತೆ ಕಾರ್ಯಾರಣೆ ಕೈಗೊಂಡ ತಂಡ, ನಗರದ ವಿವಿಧೆಡೆ ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ ಸೀಲ್, ರಬ್ಬರ್ ಸೀಲ್ಗಳು, 233 ಖಾಲಿ ಹಾಳೆಗಳು, ವಿವಿಧ ಮುಖ ಬೆಲೆಯ 663 ಖಾಲಿ ನಕಲಿ ಛಾಪಾ ಕಾಗದ, ಪ್ಯಾಕಿಂಗ್ ಆಗಿರುವ 136 ನಕಲಿ ಛಾಪಾ ಕಾಗದ ಸೇರಿ 63 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರು ಅಕ್ರಮವಾಗಿ ಹಣ ಸಂಪಾದನೆ ಮಾಡುವ ದೃಷ್ಟಿಯಿಂದ ಕಾನೂನುಬಾಹಿರವಾಗಿ 2005ರಿಂದಲೂ ಈ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. 2020ಕ್ಕಿಂತಲೂ ಹಳೆಯ ನಕಲಿ ಛಾಪಾ ಕಾಗದಗಳನ್ನು ಅಸಲಿ ಎಂದು ಬಿಂಬಿಸಿ ಪರಿಚಯಸ್ಥ ಗಿರಾಕಿಗಳಿಗೆ 3 ರಿಂದ 5 ಸಾವಿರ ಹಾಗೂ ಅಪರಿಚಿತರಿಗೆ 5ರಿಂದ 10 ಸಾವಿರವರೆಗೆ ಮಾರಾಟ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದರು ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ (Police Commissioner Kamal Pant) ತಿಳಿಸಿದ್ದಾರೆ.