ಬೆಂಗಳೂರು: ಹಣಕ್ಕಾಗಿ ದರೋಡೆಕೋರರ ಜೊತೆ ಶಾಮೀಲಾಗಿ ವ್ಯವಸ್ಥಿತ ಸಂಚು ರೂಪಿಸಿ ಪೊಲೀಸರೇ ಚಿನ್ನಾಭರಣ ದೋಚಿದ ಆರೋಪದಡಿ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ 8 ಮಂದಿ ದರೋಡೆಕೋರರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಡುಗೋಡಿ ಠಾಣೆಯ ಕಾನ್ಸ್ಟೇಬಲ್ ಅಶೋಕ್, ಸಹಚರರಾದ ಜೀತು, ಸೂರಜ್ ಯಾದವ್, ಶೇಖ್ ಮೊಹಮ್ಮದ್, ನದೀಂಪಾಷ, ಸೈಯ್ಯದ್ ಫರೋಜ್, ಸಂದೀಪ್ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಮತ್ತೋರ್ವ ಕಾನ್ಸ್ಟೇಬಲ್ ತಲೆಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಜೀತು ಹಾಗೂ ಸೂರಜ್ ಯಾದವ್ ಈ ಇಬ್ಬರು ತಂದೆ-ಮಗನಾಗಿದ್ದು ಇಬ್ಬರು ಮೂಲ ಪಶ್ಚಿಮ ಬಂಗಾಳದವರು. ನರ್ಗತಪೇಟೆಯ ಅಣಮ್ಮಗಲ್ಲಿಯ ಮನೆಯಂತಿದ್ದ ಜ್ಯುವೆಲ್ಲರಿ ಶಾಪ್ ಕಟ್ಟಡದ ಮಾಲೀಕರಾಗಿದ್ದಾರೆ. ಇದೇ ಕಟ್ಟಡದಲ್ಲಿ ಬಾಡಿಗೆ ಪಡೆದು ಜ್ಯುವೆಲ್ಲರಿ ಶಾಪ್ ಇಟ್ಟುಕೊಂಡು ಕಾರ್ತಿಕ್ ವ್ಯವಹಾರ ನಡೆಸುತ್ತಿದ್ದ. ಆದರೆ ಪರವಾನಗಿ, ಟ್ರೇಡ್ ಲೈಸೆನ್ಸ್ ಯಾವುದನ್ನು ಪಡೆಯದೆ ಉದ್ಯಮ ನಡೆಸುತ್ತಿದ್ದರು ಎನ್ನಲಾಗ್ತಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ತಂದೆ-ಮಗ ಕಾರ್ತಿಕ್ನನ್ನು ಬ್ಲ್ಯಾಕ್ ಮೇಲ್ ಮಾಡಿ ದರೋಡೆ ಮಾಡಿದರೆ ಹಣ ಸಂಪಾದಿಸಬಹುದು. ಅಲ್ಲದೇ ಪರವಾನಗಿ ಇಲ್ಲದಿರುವ ಕಾರಣ ಕಾರ್ತಿಕ್ ಪೊಲೀಸರಿಗೆ ದೂರು ನೀಡುವುದಿಲ್ಲ ಎಂದು ಭಾವಿಸಿ ದರೋಡೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದರು ಎಂದು ತಿಳಿದುಬಂದಿದೆ.
ಪೊಲೀಸರ ಸೋಗಿನಲ್ಲಿ ಜ್ಯುವೆಲ್ಲರಿ ಮೇಲೆ ದಾಳಿ: ಲಕ್ಷಾಂತರ ರೂ. ಮೌಲ್ಯದ ಚಿನ್ನ ದೋಚಿದ ಆರೋಪಿಗಳು ಅರೆಸ್ಟ್
ಸೂರಜ್ಗೆ ಪರಿಚಯವಿದ್ದ ಆರೋಪಿ ನದೀಂಪಾಷಾಗೆ ದರೋಡೆ ಸಂಚಿನ ಬಗ್ಗೆ ತಿಳಿಸಿದ್ದು, ಆತ ಕೂಡ ಹಣದಾಸೆಗೆ ಓಕೆ ಎಂದಿದ್ದ. ಅಪಘಾತ ಪ್ರಕರಣದಲ್ಲಿ ಕಾಡುಗೋಡಿ ಠಾಣೆ ಕಾನ್ಸ್ಟೇಬಲ್ ಅಶೋಕ ಹಾಗೂ ಮತ್ತೊಬ್ಬ ಕಾನ್ಸ್ಟೇಬಲ್ಗಳೊಂದಿಗೆ ನಂಟು ಹೊಂದಿದ್ದ ನದೀಂಪಾಷಾ ದರೋಡೆ ಕುರಿತ ಪ್ಲ್ಯಾನ್ ತಿಳಿಸಿದ್ದಾನೆ. ಪೊಲೀಸ್ನಂತೆ ಇರುವಂತೆ ನಮ್ಮೊಂದಿಗೆ ಸಹಕರಿಸು ಎಂದಿದ್ದಾನೆ. ಇದಕ್ಕೆ ಪೊಲೀಸರು ಕೂಡ ಓಕೆ ಅಂದಿದ್ದಾರೆ.
ಗುಂಪು ರಚಿಸಿಕೊಂಡು ಸೂರಜ್ ಸೂಚನೆಯಂತೆ ನ. 11ರಂದು ಕಾರಿನಲ್ಲಿ ರಾತ್ರಿ ನರ್ಗತಪೇಟೆಯಲ್ಲಿರುವ ಜ್ಯೂವೆಲ್ಲರಿ ಶಾಪ್ಗೆ ಬಂದಿದ್ದಾರೆ. ಪೊಲೀಸ್ ಸೋಗಿನಲ್ಲಿ, ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ನಕಲಿ ಚಿನ್ನ ಮಾರಾಟ ಮಾಡುತ್ತಿರುವುದರ ಬಗ್ಗೆ ಮಾಹಿತಿ ಬಂದಿದೆ. ಹೀಗಾಗಿ ತಪಾಸಣೆ ನಡೆಸಬೇಕೆಂದು ಹೇಳಿ ಒಳ ಪ್ರವೇಶಿದ್ದಾರೆ. ಶಾಪ್ನಲ್ಲಿದ್ದ ಚಿನ್ನದ ಗಟ್ಟಿ ಸೇರಿದಂತೆ ಸುಮಾರು 240 ಗ್ರಾಂ. ಚಿನ್ನವನ್ನು ಕದ್ದು ಮಾರನೆ ದಿನ ಪೊಲೀಸ್ ಠಾಣೆಗೆ ಬರುವಂತೆ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದರು. ಘಟನೆ ನಡೆದು ಎರಡು ದಿನಗಳ ಬಳಿಕ ನ.13 ರಂದು ಮಾಲೀಕ ಕಾರ್ತಿಕ್ ಪೊಲೀಸ್ ಠಾಣೆಗೆ ಹೋದಾಗ ದರೋಡೆಕೋರರು ಚಿನ್ನ ಲೂಟಿ ಮಾಡಿರುವುದು ಗೊತ್ತಾಗಿತ್ತು. ಈ ಸಂಬಂಧ ದೂರು ನೀಡಿದ್ದರು.
ಪ್ರಕರಣ ತನಿಖೆ ಕೈಗೊಂಡ ಪೊಲೀಸರಿಗೆ ಕಾರ್ತಿಕ್ನನ್ನು ವಿಚಾರಣೆ ನಡೆಸಿದಾಗ ಚಿನ್ನ ವ್ಯಾಪಾರ ಮಾಡಲು ಪರವಾನಗಿ, ಟ್ರೇಡ್ ಲೈಸೆನ್ಸ್ ಪಡೆದುಕೊಂಡಿಲ್ಲದಿರುವುದು ಗೊತ್ತಾಗಿದೆ. ಬಳಿಕ ಅಂಗಡಿ ನೌಕರರನ್ನು ವಿಚಾರಣೆ ನಡೆಸಿದಾಗ ಆರೋಪಿಗಳು ಬಂದಿದ್ದ ಕಾರಿನ ಸಂಖ್ಯೆ, ಗುರುತು ನೀಡಿದ್ದಾರೆ. ಇದೇ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ನಾಗಮಂಗಲದಲ್ಲಿ ಕಾರು ರಿಜಿಸ್ಟರ್ ಆಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸ್ ತಂಡ ಅಲ್ಲಿಗೆ ತೆರಳಿ ವಿಚಾರಣೆ ನಡೆಸಿದಾಗ ಕಾರು ಮಾರಾಟ ಮಾಡಿರುವುದಾಗಿ ಹಳೆ ಮಾಲೀಕ ತಿಳಿಸಿದ್ದಾನೆ. ಹಂತ ಹಂತವಾಗಿ ಕಾರು ಆರು ಜನರಿಗೆ ಮಾರಾಟವಾಗಿ ವರ್ಗಾವಣೆಗೊಂಡು ಅಂತಿಮವಾಗಿ ನಗರದ ಅನ್ನಸಂದ್ರಪಾಳ್ಯದಲ್ಲಿ ವಾಸವಾಗಿದ್ದ ಆರೋಪಿ ಶೇಖ್ ಮೊಹಮ್ಮದ್ ಬಳಿ ತಲುಪಿರುವುದು ಗೊತ್ತಾಗಿದೆ. ಆತನನ್ನು ಪತ್ತೆ ಹಚ್ಚಿ ಬಂಧಿಸಿದಾಗ ನಡೆದ ಸಂಗತಿಗಳೆಲ್ಲವನ್ನು ಬಾಯ್ಬಿಟ್ಟಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರ ನಕಲಿ ವೇಷದಲ್ಲಿ ದಾಳಿ ನಡೆಸಿದ್ದ ಖದೀಮರು ಚಿನ್ನಾಭರಣಗಳನ್ನು ಸಮಾರು 9 ಲಕ್ಷಕ್ಕೆ ಮಾರಿ, ಇದರಿಂದ ಬಂದ ಹಣವನ್ನು ಆರೋಪಿಗಳು ಹಂಚಿಕೊಂಡಿದ್ದಾರೆ. ನಕಲಿ ಪೊಲೀಸ್ ದಾಳಿಯಲ್ಲಿ ಸಹಕರಿಸಿದ ಇಬ್ಬರು ಕಾನ್ಸ್ಟೇಬಲ್ಗಳಿಗೆ ತಲಾ ಒಂದೊಂದು ಲಕ್ಷ ನೀಡಿದ್ದರು ಎಂದು ಹೇಳಲಾಗ್ತಿದೆ.