ಬೆಂಗಳೂರು:ಪೊಲೀಸ್ ಆಗುವ ಕನಸು ಕಂಡ ಯುವಕ ಪರೀಕ್ಷೆ ಬರೆದರೂ ಉತ್ತೀರ್ಣನಾಗದೇ ಪೊಲೀಸ್ ಧಿರಿಸಿನಲ್ಲಿ ಸುಲಿಗೆಗೆ ಇಳಿದು ಜೈಲುಪಾಲಾಗಿದ್ದಾನೆ. ಈ ನಕಲಿ ಪೊಲೀಸ್ನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಕೊಪ್ಪಳ ಮೂಲದವನಾದ ಬಾಗಲಗುಂಟೆ ನಿವಾಸಿ ಕೀರಪ್ಪ ಬಂಧಿತ ನಕಲಿ ಪೊಲೀಸ್. ಈತ ಪೊಲೀಸ್ ಕಾನ್‌ಸ್ಟೇಬಲ್ ಆಗಬೇಕೆಂಬ ಆಸೆ ಇಟ್ಟುಕೊಂಡು ಶಿಕ್ಷಣ ಮುಗಿಸಿ ಪರೀಕ್ಷೆ ಬರೆದಿದ್ದ. ಆದರೆ, ಈತ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಲಿಲ್ಲ. ಆದರೆ, ಈತನ ಪಾಲಕರು ಮಗ ಪೊಲೀಸ್ ಆಗಿ ಸಮಾಜ ಸೇವೆ ಮಾಡಬೇಕು ಎಂಬ ಕನಸು ಕಂಡಿದ್ದರು. ಇತ್ತ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿಚಾರ ಮನೆಯಲ್ಲಿ ತಿಳಿಸಲು ಮುಜುಗರಗೊಂಡ ಕೀರಪ್ಪ, ತಾನು ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಆಗಿ ಆಯ್ಕೆಯಾಗಿರುವುದಾಗಿ ಮನೆಯಲ್ಲಿ ಸುಳ್ಳು ಹೇಳಿದ್ದ.
ಕಳೆದ 2 ತಿಂಗಳ ಹಿಂದೆ ಪೊಲೀಸ್ ಧಿರಿಸನ್ನು ಧರಿಸಿ ಬೆಂಗಳೂರಿನ ಕೆ.ಪಿ.ಅಗ್ರಹಾರದಲ್ಲಿ ತನ್ನದೇ ಪಲ್ಸರ್ ಬೈಕ್‌ನಲ್ಲಿ ಓಡಾಡುತ್ತಿದ್ದ. ತಾನು ವಾಸವಿದ್ದ ಬಾಡಿಗೆ ಮನೆಯ ಮಾಲೀಕನಿಗೂ ಪೊಲೀಸ್ ಕಾನ್‌ಸ್ಟೇಬಲ್ ಎಂದು ನಂಬಿಸಿದ್ದ. ಜೀವನ ನಿರ್ವಹಣೆಗಾಗಿ ಬೆಳಗ್ಗೆ ಪಿಜಿಗಳು, ಸಣ್ಣ ಅಂಗಡಿ ಮಾಲೀಕರು ಹಾಗೂ ಆಮಾಯಕರನ್ನು ಗುರುತಿಸಿ ಪೊಲೀಸರ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮಂಗಳೂರು ಪೊಲೀಸ್ ಹಲ್ಲೆ ಪ್ರಕರಣದಲ್ಲಿ ಎಸ್ಡಿಪಿಐ ಕೈವಾಡ: ನಳೀನ್ ಕುಮಾರ್ ಕಟೀಲ್
ಟಿ.ದಾಸರಹಳ್ಳಿ ನಿವಾಸಿ ಸುರೇಶ್ ಜಾಲಹಳ್ಳಿ ಕ್ರಾಸ್ ಬಳಿ ಪುರುಷರ ಪಿ.ಜಿ ನಡೆಸುತ್ತಿದ್ದು, ಇಲ್ಲಿ 25 ಮಂದಿ ವಾಸಿಸುತ್ತಿದ್ದಾರೆ. ಪ್ರತಿ ತಿಂಗಳು ಒಬ್ಬರಿಂದ 5 ಸಾವಿರ ರೂ. ಪಡೆಯುತ್ತಿದ್ದರು. ಎಲ್ಲ ಕಾನೂನು ನಿಯಮಗಳನ್ನು ಪಾಲಿಸಿಯೇ ಪಿ.ಜಿ. ನಡೆಸಲಾಗುತ್ತಿತ್ತು. ಜ. 26ರಂದು ರಾತ್ರಿ ಸುರೇಶ್ ಪಿಜಿಯ ಕೆಲಸ ಮುಗಿಸಿ ಮನೆಗೆ ಹೋಗಲು ಮುಂದಾದ ವೇಳೆ ಪಲ್ಸರ್ ಬೈಕ್‌ನಲ್ಲಿ ಪೊಲೀಸ್ ಸೋಗಿನಲ್ಲಿ ಇವರ ಬಳಿ ಬಂದ ಆರೋಪಿ ಕೀರಪ್ಪ ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ಪಿಜಿಯಲ್ಲಿ ಏನೇನು ಕೆಲಸ ಮಾಡುತ್ತಿದ್ದೀರಾ ಎಂಬುದು ನನಗೆ ಗೊತ್ತಿದೆ. ನನಗೆ ಮಾಮೂಲಿ ಕೊಡದಿದ್ದರೆ ಪಿಜಿಯಲ್ಲಿ ಅಕ್ರಮ ದಂಧೆ ನಡೆಯುತ್ತಿದೆ ಎಂದು ಸುಳ್ಳು ದೂರು ದಾಖಲಸಿಕೊಂಡು ಜೈಲಿಗೆ ಹಾಕಿಸುತ್ತೇನೆ. ನಿನ್ನ ಪಿಜಿಯನ್ನು ಮುಚ್ಚಿಸಿ ನಿನ್ನ ಪತ್ನಿ ಮತ್ತು ಮಕ್ಕಳನ್ನು ಬೀದಿ ಪಾಲು ಮಾಡುತ್ತೇನೆ’ ಎಂದು ಹೆದರಿಸಿದ್ದ.
ಪಿಜಿಯಲ್ಲಿದ್ದವರು ಆಗತಾನೇ ಕೊಟ್ಟಿದ್ದ 10 ಸಾವಿರ ರೂ.ಗಳನ್ನು ಸುರೇಶ್ ಅವರಿಂದ ಕಸಿದುಕೊಂಡ ಕೀರಪ್ಪ, ಅಲ್ಲಿಂದ ಪರಾರಿಯಾಗಿದ್ದ. ಈತ ನಿಜವಾದ ಪೊಲೀಸ್ ಇರಬಹುದು ಎಂದು ಭಾವಿಸಿದ್ದ ಸುರೇಶ್ ಆರಂಭದಲ್ಲಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದರು. ಇದಾದ ಬಳಿಕ ಕುಟುಂಬಸ್ಥರ ಜೊತೆ ಚರ್ಚಿಸಿ,ಅವರ ಸಲಹೆ ಮೇರೆಗೆ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾದ ಸತ್ಯ ಬೆಳಕಿಗೆ ಬಂದಿದೆ.