ಬೆಂಗಳೂರು: ಪ್ರತಿಷ್ಠಿತ ಏಷ್ಯನ್ ಪೇಂಟ್ ಬ್ರ್ಯಾಂಡ್ ರೀತಿಯಲ್ಲೇ ನಕಲಿ ಪೇಂಟ್ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ವಿ.ವಿ.ಪುರಂ ಠಾಣೆಯ ಪೊಲೀಸರು ಬಯಲಿಗೆಳೆದಿದ್ದಾರೆ. ಏಷ್ಯನ್ ಪೇಂಟ್ಸ್ ಕಂಪನಿಯಂತೆ ಪೇಂಟ್ ನಕಲಿಗೊಳಿಸಿ ಮಾರಾಟ ಮಾಡುತ್ತಿದ್ದ ಲಾಲ್ ಬಂಧಿತ ಆರೋಪಿ.
10 ವರ್ಷದಿಂದ ವಂಚನೆ:ಆರೋಪಿ ಲಾಲ್ ಕಳೆದ ಹತ್ತು ವರ್ಷದಿಂದ ನಕಲಿ ಪೇಂಟ್ ತಯಾರಿಸಿ ಮಾರಾಟ ಮಾಡುತ್ತಿದ್ದ. ತನ್ನದೇ ಆದ ಪೇಂಟ್ ಶೋ ರೂಂ ಹೊಂದಿದ್ದ. ಬಹುತೇಕ ಎಲ್ಲ ಪೇಂಟ್ಸ್ ಬಗ್ಗೆ ಅರಿತಿದ್ದು ಏಷ್ಯನ್ ಪೇಂಟ್ ಕಂಪನಿ ಹೆಸರು ಬಳಸಿ ಮೋಸ ಮಾಡುತಿದ್ದನು. ಹೀಗೆ ಹಲವು ವರ್ಷಗಳಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಪೇಂಟ್‌ಗಳನ್ನು ನಕಲುಗೊಳಿಸಿ, ನಕಲಿ ಪೇಂಟ್ ಗೆ ಏಷ್ಯನ್ ಪೇಂಟ್ ಸ್ಟಿಕ್ಕರ್ ಸೇರಿದಂತೆ ಇತರೆ ವಸ್ತುಗಳನ್ನೂ ನಕಲಿಸಿ ಮಾರಾಟ ಮಾಡುತ್ತಿದ್ದನು. ಈ ನಕಲಿ ಆಟದ ಬಗ್ಗೆ ತಿಳಿದ ಏಷ್ಯನ್ಸ್ ಪೇಂಟ್ಸ್‌ನ ಅಸಲಿ ಮಾರಾಟಗಾರರು ವಿವಿ ಪುರಂ ಪೊಲೀಸರಿಗೆ ದೂರು ನೀಡಿದ್ದರು. ಸ್ಯಾಂಪಲ್‌ಗಾಗಿ ಒಂದು ಪೇಂಟ್ ಖರೀದಿಸಿ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆಯಲ್ಲಿ ನಕಲಿ ಪೇಂಟ್ ಎಂಬುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಜ್ಯೋತಿಷ್ಯ ಹೇಳುವ ನೆಪದಲ್ಲಿ ಚಿನ್ನದ ಗಟ್ಟಿ ದೋಚಿ ಪರಾರಿ: ಚಿನ್ನದ ಅಂಗಡಿ ಕೆಲಸಗಾರನನ್ನು ಜ್ಯೋತಿಷ್ಯ ಹೇಳುವ ನೆಪದಲ್ಲಿ ಮರುಳು ಮಾಡಿ ಚಿನ್ನದ ಗಟ್ಟಿ ದೋಚಿ ಪರಾರಿಯಾಗಿರುವ ಘಟನೆ ಮಾರ್ಚ್ 27ರಂದು ಮಧ್ಯಾಹ್ನ ಹಲಸೂರು ಗೇಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಂಗಾಲಿ ಬಾಬಾಗಳೆಂದು ಸುಮನ್ ಸರ್ಕಾರ್ನನ್ನು ನಂಬಿಸಿದ ಇಬ್ಬರು ಅಪರಿಚಿತರು, ಆತನ ಬಳಿಯಿದ್ದ 73 ಗ್ರಾಂ ತೂಕದ ಚಿನ್ನದ ಗಟ್ಟಿ ಪಡೆದು ಪರಾರಿಯಾಗಿದ್ದರು.