ಕರ್ನಾಟಕ

karnataka

ETV Bharat / state

ಕರ್ನಾಟಕ ಪೊಲೀಸರ ವಿರುದ್ಧ ಸುಳ್ಳು ವಿಡಿಯೋ ವೈರಲ್: ಆರೋಪಿ ಬಂಧನ - Congress activist Padma Harish arrested

ಕರ್ನಾಟಕ ಪೊಲೀಸರ ವಿರುದ್ದ ಸುಳ್ಳು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕೆಟ್ಟ ಹೆಸರು ತರಲು ಪ್ರಯತ್ನಿಸಿದ್ದ ಆರೋಪದ ಮೇರೆಗೆ ಕಾಂಗ್ರೆಸ್ ಕಾರ್ಯಕರ್ತೆ ಪದ್ಮಾ ಹರೀಶ್ ಎಂಬಾಕೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

fake-news-video-about-police-rowdisheter-laxman-murder-case
ಕಾಂಗ್ರೆಸ್ ಕಾರ್ಯಕರ್ತೆ ಪದ್ಮಾ ಹರೀಶ್

By

Published : May 12, 2021, 4:01 PM IST

Updated : May 12, 2021, 6:09 PM IST

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಪೊಲೀಸರ ವಿರುದ್ದ ಸುಳ್ಳು ಸುದ್ದಿಯ ವಿಡಿಯೋ ಹರಿಬಿಟ್ಟು, ಪೊಲೀಸ್​ ಇಲಾಖೆಗೆ ಮಸಿ ಬಳಿಯಲು ಮುಂದಾಗಿದ್ದ ಕಾಂಗ್ರೆಸ್ ಕಾರ್ಯಕರ್ತೆಯನ್ನು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಪದ್ಮಾ ಹರೀಶ್ ಬಂಧಿತ ಕಾಂಗ್ರೆಸ್ ಕಾರ್ಯಕರ್ತೆ. ವಿಚಾರಣೆ ವೇಳೆ ಉದ್ದೇಶಪೂರ್ವಕವಾಗಿಯೇ ಮುಂಬೈನ ಹಳೆ ವಿಡಿಯೋಗೆ ಹಿನ್ನೆಲೆ ಧ್ವನಿ ಸೇರಿಸಿ ಫೇಸ್ ಬುಕ್ ಗೆ ಹರಿಬಿಟ್ಟಿರುವ ಹಿಂದೆ ಬಲವಾದ ಕಾರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ‌.

2019 ರಲ್ಲಿ ನಗರದಲ್ಲಿ ನಡೆದ ರೌಡಿಶೀಟರ್ ಲಕ್ಷ್ಮಣ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ವರ್ಷಿಣಿ ತಾಯಿಯೇ ಈ ಪದ್ಮಾ ಹರೀಶ್. ಸದ್ಯ ಮಗಳು ಜಾಮೀನು ಮೇರೆಗೆ ಹೊರಗಿದ್ದರೆ ತಾಯಿ ಜೈಲು ಸೇರಲಿದ್ದಾಳೆ‌.

ಕೆಲವು ದಿನಗಳಿಂದ ಫೇಸ್​ಬುಕ್​​ನಲ್ಲಿ ‌ಕರ್ನಾಟಕ ಪೊಲೀಸರು ಲಾಕ್​ಡೌನ್​ ವೇಳೆ ವ್ಯಕ್ತಿಯ ಮೇಲೆ ಹಲ್ಲೆ ಕುರಿತಂತೆ ವಿಡಿಯೋ ವೈರಲ್ ಆಗಿತ್ತು. ಕರ್ನಾಟಕದಲ್ಲಿ ಆಗಿದೆ ಎಂದು ಹಿನ್ನೆಲೆ ಧ್ವನಿ ಇದ್ದರಿಂದ ವಿಡಿಯೋ ವೈರಲ್ ಮಾಡಲಾಗಿತ್ತು. ಪರಿಣಾಮ ನೈಜತೆ ಅರಿಯದೇ ಸಾರ್ವಜನಿಕರು ಪೊಲೀಸರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ವಿಡಿಯೋ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಿದಾಗ 2020ರ ಏ. 20ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಸ್ಥಳೀಯ ಪೊಲೀಸರು ವ್ಯಕ್ತಿಯೊಬ್ಬರಿಗೆ ಹೊಡೆದಿರುವುದು ಗೊತ್ತಾಗಿತ್ತು. ಈ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಕಂಡುಕೊಂಡು ಆಯುಕ್ತ ಕಮಲ್‌ ಪಂತ್, ಪ್ರಚೋದನೆಗೆ ಕಾರಣವಾಗುವ ಹಾಗೂ ಸುಳ್ಳು‌ ಸುದ್ದಿ ಹಬ್ಬಿಸಿದ್ದ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ಇದರಂತೆ ದಕ್ಷಿಣ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.‌ ಕಮೀಷನರ್ ಸೂಚನೆ ಮೇರೆಗೆ ಸಿಸಿಬಿ ಮಾದಕ ದ್ರವ್ಯ ವಿಭಾಗದ ಇನ್ಸ್​ಪೆಕ್ಟರ್​ ಅಂಜುಮಾಲಾ ನಾಯಕ್ ಹಾಗೂ‌ ಯಲಹಂಕ‌ ಠಾಣೆಯ ಇನ್ಸ್​ಪೆಕ್ಟರ್​ ಸತ್ಯನಾರಾಯಣ್ ನೇತೃತ್ವದಲ್ಲಿ‌‌‌ ಕುಂಬಳಗೋಡು ಸಮೀಪದ ಮಿಲೇನಿಯಂ ಬಿಗ್ರೇಡ್ ಅಪಾರ್ಟ್​ಮೆಂಟ್​ನಲ್ಲಿ ಆರೋಪಿ ಪದ್ಮಾಳನ್ನು ಬಂಧಿಸಿ ನಗರ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ವಿಚಾರಣೆ ವೇಳೆ ಕೊಲೆ ಪ್ರಕರಣದಲ್ಲಿ ಬಂಧಿಸಿದಕ್ಕೆ ಕೋಪಗೊಂಡು ಪೊಲೀಸರಿಗೆ ಅವಮಾನವಾಗುವ ಹಾಗೆ ಹಳೇ ವಿಡಿಯೋಗೆ ಹಿನ್ನೆಲೆ ಧ್ವನಿ ಸೇರಿಸಿ ವೈರಲ್ ಮಾಡಿದೆ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಓದಿ:ಡಿಸಿಎಂ ತವರಲ್ಲೂ ಆಕ್ಸಿಜನ್ ಬೆಡ್​ ಸಮಸ್ಯೆ.. ಆಸ್ಪತ್ರೆ ಮುಂಭಾಗದಲ್ಲೇ ಪ್ರಾಣಬಿಟ್ಟ ಕೋವಿಡ್ ರೋಗಿ

Last Updated : May 12, 2021, 6:09 PM IST

ABOUT THE AUTHOR

...view details