ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೃಹತ್ ನಕಲಿ ಮಾರ್ಕ್ಸ್ ಕಾರ್ಡ್ ಜಾಲ ಪತ್ತೆ ಹಚ್ಚಿ ಆರೋಪಿಗಳ ಹೆಡೆಮುರಿ ಕಟ್ಟಿದ್ದ ಜಯನಗರ ಪೊಲೀಸರು ಇದೀಗ ಅಂಕಪಟ್ಟಿಯ ಅಸಲಿತನದ ಬಗ್ಗೆ 10 ವಿಶ್ವವಿದ್ಯಾಲಯಗಳಿಗೆ ಸ್ಪಷ್ಟನೆ ಕೋರಿ ಪತ್ರ ಬರೆದಿದ್ದಾರೆ. ಕಳೆದ ಐದಾರು ವರ್ಷಗಳಿಂದ ನಕಲಿ ಮಾರ್ಕ್ಸ್ ಕಾರ್ಡ್ ಜಾಲದಲ್ಲಿ ತೊಡಗಿಸಿಕೊಂಡಿದ್ದ ಧರ್ಮೇಂದ್ರ, ನರೇಶ್, ದಿಲೀಪ್ ಹಾಗೂ ರಘು ಎಂಬುವರನ್ನು ಬಂಧಿಸಿ 150 ನಕಲಿ ಮಾರ್ಕ್ಸ್ ಕಾರ್ಡ್ ಜಪ್ತಿ ಮಾಡಿಕೊಳ್ಳುವಲ್ಲಿ ಜಯನಗರ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಯಶಸ್ವಿಯಾಗಿದೆ. ಮಾರ್ಕ್ಸ್ ಕಾರ್ಡ್ ಮುಟ್ಟುಗೋಲು ಹಾಕಿಕೊಂಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಆಯಾ ಕಾಲೇಜುಗಳಿಗೆ ಮಾರ್ಕ್ಸ್ ಕಾರ್ಡ್ ನೈಜತೆ ಬಗ್ಗೆ ಸ್ಪಷ್ಟನೆ ಕೋರಿ ಪತ್ರ ಬರೆದಿದ್ದಾರೆ.
10 ಕಾಲೇಜುಗಳಿಗೆ ನೋಟಿಸ್: ಅಧಿಕೃತವಾಗಿ ಕಾಲೇಜು ಆಡಳಿತ ಮಂಡಳಿಯಿಂದ ಮಾರ್ಕ್ಸ್ ಕಾರ್ಡ್ ನೀಡಿರುವುದೇ ಅಥವಾ ಆರೋಪಿಗಳು ನಕಲಿ ಮಾರ್ಕ್ಸ್ ಮಾಡಿಸಿಕೊಂಡಿದ್ದಾರಾ? ಎಂಬುದನ್ನು ದೃಢಪಡಿಸಿಕೊಳ್ಳಲು ಮಂಗಳೂರು ಯೂನಿವರ್ಸಿಟಿ, ಸಿವಿಆರ್ ಯೂನಿವರ್ಸಿಟಿ - ಜಾರ್ಖಂಡ್, ಕರ್ನಾಟಕ ಓಪನ್ ಯೂನಿವರ್ಸಿಟಿ, ಜವಾಹರಲಾಲ್ ನೆಹರೂ ಯೂನಿವರ್ಸಿಟಿ - ದೆಹಲಿ, ಕುವೆಂಪು ಯೂನಿವರ್ಸಿಟಿ, ಜನಾರ್ಧನ್ ಯೂನಿವರ್ಸಿಟಿ - ರಾಜಸ್ಥಾನ್, ಗೀತಂ ಯೂನಿವರ್ಸಿಟಿ - ವಿಶಾಖಪಟ್ಟಣಂ, ಠಾಕೂರ್ ಯೂನಿವರ್ಸಿಟಿ - ಮಧ್ಯಪ್ರದೇಶ, ಸಿವಿ ರಾಮನ್ ಯುನಿವರ್ಸಿಟಿ - ಛತ್ತೀಸ್ ಘಡ ಹಾಗೂ ಮಂಗಳೂರು ಟೆಕ್ನಿಕಲ್ ಸೈನ್ಸ್ ಆಫ್ ಇನ್ಸ್ಟಿಟ್ಯೂಟ್ ಗಳಿಗೆ ಪತ್ರ ಬರೆದು ಸ್ಪಷ್ಟನೆ ನೀಡುವಂತೆ ತಾಕೀತು ಮಾಡಿದ್ದಾರೆ. ಅಲ್ಲದೆ ವಿಚಾರಣೆ ಕರೆದಾಗ ಬರುವಂತೆ ಪತ್ರದಲ್ಲಿ ಸೂಚಿಸಿದ್ದಾರೆ
ಇದನ್ನೂ ಓದಿ:ವಿಡಿಯೋ: ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದಾಗ ಟೈರ್ನಲ್ಲಿ ಸಿಲುಕಿ ಮಹಿಳೆ ಸಾವು