ಬೆಂಗಳೂರು: ಕಲಬುರಗಿ ಜಿಲ್ಲೆ ಆಳಂದ ಶಾಸಕ ಬಿ ಆರ್ ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬರೆದಿರುವ ಪತ್ರದ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ನಕಲಿ ಪತ್ರ ಎಂದು ಸ್ವತಃ ಶಾಸಕರೇ ಸ್ಪಷ್ಟಪಡಿಸಿದ್ದಾರೆ. ಜುಲೈ 24ರಂದು ಬಿ ಆರ್ ಪಾಟೀಲ್ ಹೆಸರಿನಲ್ಲಿ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಜಿಲ್ಲಾ ಉಸ್ತವಾರಿ ಸಚಿವರ ಅಸಹಕಾರ ಹಾಗೂ ಇಲಾಖೆಗೆ ಸಂಬಂಧಿಸಿದ ಅನುದಾನದ ಬೇಡಿಕೆಯ ಬಗ್ಗೆ ಮಾಹಿತಿ ನೀಡಿದ್ದರು.
ಬಿ ಆರ್ ಪಾಟೀಲ್ ಬರೆದಿರುವ ಪತ್ರದಲ್ಲಿರುವ ಮಾಹಿತಿ ಈ ರೀತಿ ಇದ್ದು, ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಜನರ ವಿಶ್ವಾಸ, ಭರವಸೆ ಹಾಗೂ ಅವರ ಪ್ರೀತಿಯಿಂದ ನಾವು ಶಾಸಕರಾಗಿ ಆಯ್ಕೆಯಾಗಿದ್ದೇವೆ. ಆದರೆ, ನಮ್ಮನ್ನು ಆರಿಸಿ ಕಳುಹಿಸಿದ ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ವಿವಿಧ ಇಲಾಖೆಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಸಚಿವರಿಗೆ ನಮ್ಮ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಇದರಿಂದ ಜನರ ಆಶೋತ್ತರ ಈಡೇರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಅನುದಾನ ಬಿಡುಗಡೆ ಮಾಡುವುದಕ್ಕೂ ಸಚಿವರು ಮೂರನೇ ವ್ಯಕ್ತಿ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಸ್ಥಳೀಯ ಶಾಸಕರು ನಾವು ಆಗಿದ್ದರೂ ಅನುದಾನಕ್ಕಾಗಿ ಮೂರನೇ ವ್ಯಕ್ತಿಯ ಮೊರೆ ಹೋಗಬೇಕಾಗಿರುವುದು ಅತ್ಯಂತ ಬೇಸರ ವಿಷಯ ಎಂದಿದ್ದಾರೆ.
ಇದಲ್ಲದೆ ಸಚಿವರು ತಮಗೆ ಬೇಕಾದ ಅಧಿಕಾರಿಗಳಿಗೆ ಮಣೆ ಹಾಕಿ, ಸ್ವಜನಪಕ್ಷಪಾತ ಮಾಡುತ್ತಿದ್ದಾರೆ. ನಮ್ಮ ಯಾವುದೇ ವರ್ಗಾವಣೆ ಶಿಫಾರಸು ಪತ್ರಗಳಿಗೆ ಮಾನ್ಯತೆ ಕೊಡುತ್ತಿಲ್ಲ. ಇದರಿಂದಾಗಿ ಯಾವ ಅಧಿಕಾರಿಯೂ ನಮ್ಮ ಕೆಲಸಗಳನ್ನು ಮಾಡಿ ಕೊಡುತ್ತಿಲ್ಲ, ನಮ್ಮ ಮಾತಿಗೆ ಬೆಲೆಯೂ ನೀಡುತ್ತಿಲ್ಲ. ಆದ್ದರಿಂದ ತಾವು ತಕ್ಷಣವೇ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂಬುದು ನಮ್ಮ ಕೋರಿಕೆ. ನಮ್ಮ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ತಾವು ನಡೆದುಕೊಳ್ಳುತ್ತೀರೆಂದು ಭಾವಿಸಿದ್ದೇವೆ ಎಂದು ವಿವರಿಸಿದ್ದಾರೆ.