ಬೆಂಗಳೂರು:ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹತ್ತಾರು ಜನರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿ ತಲೆಮರೆಸಿಕೊಂಡಿದ್ದ ನಕಲಿ ಐಎಎಸ್ ಅಧಿಕಾರಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಮೂಲದ ಸಂದೀಪ್ ಬಂಧಿತ. ತಾನು ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಓಡಾಡುತ್ತಿದ್ದ. ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ. ಪ್ರಾಥಮಿಕ ತನಿಖೆ ವೇಳೆ 20ಕ್ಕೂ ಹೆಚ್ಚು ಜನರಿಗೆ ಹಣ ವಂಚಿಸಿರುವುದಾಗಿ ತಿಳಿದು ಬಂದಿದೆ.
ಅಧಿಕೃತವಾಗಿ ಈತನ ವಿರುದ್ಧ ಪುಲಕೇಶಿನಗರ ಹಾಗೂ ವಿಧಾನಸೌಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ನಕಲಿ ಐಎಎಸ್ ಅಧಿಕಾರಿ ಬಂಧನ ಕುರಿತು ಪೊಲೀಸರ ಮಾಹಿತಿ ಕೆಲ ತಿಂಗಳ ಹಿಂದೆ ಆರೋಪಿಯು ಆಂಧ್ರಪ್ರದೇಶದ ತಿರುಪತಿಗೆ ಹೋಗಿದ್ದ. ಈ ವೇಳೆ, ವೀಣಾ ಎಂಬುವರ ಪರಿಚಯವಾಗಿದೆ. ಕನ್ನಡದವರು ಎಂಬ ಕಾರಣಕ್ಕಾಗಿ ವೀಣಾ ಮಾತನಾಡಿಸಿದ್ದರು. ಈ ವೇಳೆ, ತಾನೊಬ್ಬ ಐಎಎಸ್ ಅಧಿಕಾರಿ ಎಂದು ಆರೋಪಿ ಹೇಳಿಕೊಂಡಿದ್ದ. ಇದರಿಂದ ತಾನು ಬೌರಿಂಗ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಳು.
ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳ ಪರಿಚಯವಿದ್ದು, ಹಣ ನೀಡಿದರೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದ. ಇದರಂತೆ ಬೆಂಗಳೂರಿಗೆ ಬಂದ ವೀಣಾ ಒಂದು ತಿಂಗಳ ಬಳಿಕ ಕೆಲಸಕ್ಕೆ ರಾಜೀನಾಮೆ ನೀಡಿ ಆರು ಲಕ್ಷ ರೂಪಾಯಿ ಹಣ ನೀಡಿದ್ದಳು. ಜೊತೆಗೆ ಸ್ನೇಹಿತರಾಗಿದ್ದ ಸಲ್ಮಾ, ಮೀನಾ, ರವಿ ಸೇರಿದಂತೆ ಐದಾರು ಜನ ಕೆಲಸದ ಆಸೆ ಹೊತ್ತು ಹಣ ಕೊಟ್ಟಿದ್ದರು.
ವಿವಿಧ ಇಲಾಖೆಗಳಲ್ಲಿ ಹುದ್ದೆ ಕೊಡಿಸುವುದಾಗಿ ಆಶ್ವಾಸನೆ
ಆರೋಗ್ಯ ಇಲಾಖೆಯಲ್ಲಿ ಡೇಟಾ ಅನಾಲಿಸ್ಟ್, ಪ್ರವಾಸೋದ್ಯಮ ಇಲಾಖೆಯಲ್ಲಿ ಎಕ್ಸಿಕ್ಯೂಟಿವ್, ಹೈಕೋರ್ಟ್ನಲ್ಲಿ ಡಿ ದರ್ಜೆ ಹುದ್ದೆ ಕೊಡಿಸುವುದಾಗಿ ಆಶ್ವಾಸನೆ ನೀಡಿದ್ದ. ವಂಚಕನ ಸೂಚನೆಯಂತೆ ವಂಚನೆಗೊಳಗಾದವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಅನಂತರ ಕೆಲಸ ಕೊಡಿಸದೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದ. ಈ ಸಂಬಂಧ ಸೆ.28 ರಂದು ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ವೀಣಾ ದೂರು ದೂರು ನೀಡಿದ್ದರು.
ವೀಣಾ ಮತ್ತೊಂದು ಪ್ರಕರಣದಲ್ಲಿ ಆರೋಪಿ:
ಬೌರಿಂಗ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ತಬ್ರೇಜ್ ಷರೀಫ್ ಹಾಗೂ ಸಲ್ಮಾ ಕೌಸರ್ ವೀಣಾ ಪರಸ್ಪರ ಪರಿಚಿತರು. ಪುಲಕೇಶಿನಗರ ಠಾಣೆಯಲ್ಲಿ ಸಂತ್ರಸ್ತೆಯಾಗಿದ್ದ ವೀಣಾ ಮತ್ತೊಂದು ಪ್ರಕರಣದಲ್ಲಿ ಆರೋಪಿಯಾಗಿದ್ದಾಳೆ. ಪರಿಚಿತನಾಗಿದ್ದ ವಂಚಕನೊಂದಿಗೆ ಸಂದೀಪ್ ಎಂಬಾತನೊಂದಿಗೆ ಸೇರಿ ಸಹೋದ್ಯೋಗಿಗಳಿಗೆ ಸಿಸ್ಟಮ್ ಅನಾಲಿಸಿಸ್ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದಾರೆ. ಆರೋಗ್ಯ ಇಲಾಖೆಯ ನಿಕಟಪೂರ್ವ ಕಾರ್ಯದರ್ಶಿ ಜಾವೇದ್ ಅಖ್ತರ್ ಸಹಿಯನ್ನು ನಕಲು ಮಾಡಿ ನೇಮಕಾತಿ ಆದೇಶ ಪತ್ರ ನೀಡಿ ವಂಚಿಸಿದ್ದಾರೆ.