ಬೆಂಗಳೂರು: ಆಂಧ್ರ ಪ್ರದೇಶದಿಂದ ನಕಲಿ ಕರೆನ್ಸಿ ನೋಟು ತಂದು ನಗರದಲ್ಲಿ ಚಲಾವಣೆಗೆ ಪ್ರಯತ್ನಿಸುತ್ತಿದ್ದಾಗ ಮಹಿಳೆ ಸೇರಿ ಇಬ್ಬರು ಸುಬ್ರಮಣ್ಯಪುರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆಂಧ್ರದ ಕಡಪ ಜಿಲ್ಲೆಯ ಬಿ.ಚರಣ್ ಸಿಂಗ್ (47) ಮತ್ತು ರಜಪುತ್ರ ರಜನಿ (38) ಬಂಧಿತರು. ಇವರಿಂದ 500 ರೂಪಾಯಿ ಮುಖ ಬೆಲೆಯ 40 ಲಕ್ಷ ರೂ. ಮೌಲ್ಯದ ಖೋಟಾ ನೋಟು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಲಾಗಿದೆ.
"ಆಂಧ್ರ ಮೂಲದ ಚರಣ್ ಮತ್ತು ರಜಿನಿ, ಅನಂತಪುರದಲ್ಲಿ ಪರಿಚಯಸ್ಥರಿಂದ ನಕಲಿ ನೋಟನ್ನು ಕಡಿಮೆ ಬೆಲೆಗೆ ತಂದು ಬೆಂಗಳೂರಿನಲ್ಲಿ ಚಲಾವಣೆಗೆ ಪ್ರಯತ್ನಿಸುತ್ತಿದ್ದರು. ಜ.19 ರಂದು ಮಧ್ಯಾಹ್ನ 1.30ರ ಹೊತ್ತಿಗೆ ಉತ್ತರಹಳ್ಳಿ-ಕೆಂಗೇರಿ ಮುಖ್ಯರಸ್ತೆಯ ಪೂರ್ಣ ಪ್ರಜ್ಞಾ ಲೇಔಟ್‌ನ ಸಾಧನಾ ಕಾಲೇಜು ಹತ್ತಿರ ಬೊಲೆರೊ ಜೀಪ್‌ನಲ್ಲಿ ಚರಣ್ ಮತ್ತು ರಜಿನಿ ನಕಲಿ ನೋಟು ತಂದಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಇದರ ಆಧಾರದಲ್ಲಿ ಮಫ್ತಿಯಲ್ಲಿದ್ದು ಕಾರ್ಯಾಚರಣೆ ಕೈಗೊಂಡು ಬೊಲೆರೋ ಜೀಪ್ ಬಳಿಗೆ ಹೋದಾಗ ಚರಣ್ ಹೊರಗೆ ನಿಂತು ಗಿರಾಕಿಗಳಿಗೆ ಕಾಯುತ್ತಿರುವುದು ಗೊತ್ತಾಗಿದೆ."
"ತಕ್ಷಣವೇ ಸ್ಥಳಕ್ಕೆ ಹೋಗಿ ಚರಣ್‌ನನ್ನು ವಶಕ್ಕೆ ಪಡೆದು ಕಾರು ಪರಿಶೀಲಿಲಿಸಿದಾಗ ರಜನಿ ಮತ್ತು 500 ರೂ. ಮುಖಬೆಲೆಯ 8 ಬಂಡಲ್ ನೋಟುಗಳು ದೊರೆತಿವೆ. ಆರೋಪಿಗಳನ್ನು ಠಾಣೆಗೆ ತಂದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಇವರಿಗೆ ನಕಲಿ ನೋಟು ಕೊಟ್ಟವರು ಮತ್ತು ಇವರಿಂದ ಪಡೆಯಲು ಬಂದಿದ್ದವರ ಪತ್ತೆಗೂ ಬಲೆಬೀಸಲಾಗಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ವಿವಾಹೇತರ ಸಂಬಂಧ : ಮಹಿಳೆಯೊಂದಿಗೆ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಹೊಡೆದು ಕೊಂದ ಮಹಿಳೆಯ ಸಂಬಂಧಿಕರು