ಬೆಂಗಳೂರು: ಹೆಚ್ಚಿನ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ 2 ಸಾವಿರಕ್ಕೂ ಹೆಚ್ಚು ಜನರಿಂದ ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿಸಿಕೊಂಡಿದ್ದ ನಕಲಿ ಕಂಪನಿ ಮಾಲೀಕನನ್ನು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ವಂಚನೆ ಸಂಬಂಧ ಸಿಸಿಬಿ ಇನ್ಸ್ಪೆಕ್ಟರ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ರಂಗನಾಥ್ ಎಂಬಾತನನ್ನು ಬಂಧಿಸಿದ್ದಾರೆ. ರಂಗನಾಥ್ ಹಾಗೂ ಆತನ ಸಹಚರರು ಆನ್ಲೈನ್ ಮುಖಾಂತರ ಅನಧಿಕೃತವಾಗಿ ಡಿಜಿಟೆಕ್ ಕಂಪನಿ ತೆರೆದಿದ್ದರು. ನಿರ್ದಿಷ್ಟ ಕಚೇರಿ ಹೊಂದಿರದೆ ಆನ್ಲೈನ್ ಮೂಲಕವೇ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಫೇಸ್ಬುಕ್, ಯೂಟ್ಯೂಬ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಹಾಕಿ ಜೂಮ್ ಮೀಟಿಂಗ್ನಲ್ಲಿ ಪ್ರಚಾರ ಮಾಡಿ ಜನರನ್ನು ಸೆಳೆದು ಪುಸಲಾಯಿಸಿ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು.
15 ಸಾವಿರ ರೂ. ಪಾವತಿಸಿ ಸದಸ್ಯತ್ವ ಪಡೆದುಕೊಂಡರೆ ಒಂದು ವರ್ಷದಲ್ಲಿ 1 ಲಕ್ಷ ರೂ., 2 ವರ್ಷದಲ್ಲಿ 5 ಲಕ್ಷ ರೂ., 3 ವರ್ಷಕ್ಕೆ 12 ಲಕ್ಷ ರೂ. ಹಾಗೂ 5 ವರ್ಷಕ್ಕೆ 25 ಲಕ್ಷ ರೂ. ಹಣ ಸಿಗಲಿದೆ ಎಂದು ಆಮಿಷವೊಡ್ಡುತ್ತಿದ್ದರು. ಅಲ್ಲದೆ ಪ್ರತಿಯಾಗಿ ಅಸಲಿನ ಹಣದ ಜೊತೆ ಶೇ.25 ಲಾಭಾಂಶ ನೀಡುವುದಾಗಿ ನಂಬಿಸಿ ಸುಮಾರು 2 ಸಾವಿರ ಜನರಿಂದ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸದಸ್ಯತ್ವ ಪಡೆದವರಿಗೆ ಕಂಪನಿಯ ಯುಸರ್ ನೇಮ್ ಪಾಸ್ವರ್ಡ್ ನೀಡಿ ಏಜೆಂಟರನ್ನಾಗಿ ಮಾಡಿಸುತ್ತಿದ್ದರು. ಇತರೆ ಸದಸ್ಯರನ್ನು ಕಂಪನಿಗೆ ನೋಂದಾಯಿಸಿದರೆ ಶೇ.25 ರಷ್ಟು ಹಾಗೂ ಲೀಡರ್ಗಳಿಗೆ ಶೇ.1ರಷ್ಟು ಕಮೀಷನ್ ನೀಡುವುದಾಗಿ ನಂಬಿಸುತ್ತಿದ್ದರು. ಈ ಮೂಲಕ ಚೈನ್ ಲಿಂಕ್ ಆಧಾರದಲ್ಲಿ ಹೂಡಿಕೆ ಮಾಡಿಸಲು ಆಮಿಷವೊಡ್ಡಿದ್ದರು.
ಹೂಡಿಕೆಯಾದ ಕೋಟ್ಯಾಂತರ ಹಣವನ್ನು ಕ್ರಿಪ್ಟೊ ಕರೆನ್ಸಿಯ ಟ್ರೋನ್ ಕಾಯಿನ್ ಆಗಿ ಹೂಡಿಕೆ ಮಾಡಿ ಕಂಪನಿ ಹೆಸರಿನಲ್ಲಿ ಡಿಟಿಎಂ ಟೋಕನ್ ಎಂದು ರೂಪಿಸಿ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದರು. ಸದ್ಯ ಆರೋಪಿ ರಂಗನಾಥ್ನನ್ನು ಸಿಸಿಬಿ ಅಧಿಖಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.