ಬೆಂಗಳೂರು: ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ ಅಂತಾ ಬಿಜೆಪಿ ಸರ್ಕಾರ ಬೀಗುತ್ತಲೇ ಇರುತ್ತದೆ. ಆದರೆ ಅನುದಾನ ಬಿಡುಗಡೆ ವಿಚಾರದಲ್ಲಿ ಮಾತ್ರ ಕೇಂದ್ರದ ಇಂಜಿನ್ ಚಲಿಸುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕೇಂದ್ರ ಪುರಸ್ಕೃತ ಬಹುತೇಕ ಯೋಜನೆಗಳು ಶೂನ್ಯ ಪ್ರಗತಿ ಕಂಡರೆ, ಹಲವು ಯೋಜನೆಗಳಿಗೆ ಕೇಂದ್ರ ಅನುದಾನವನ್ನೇ ಬಿಡುಗಡೆ ಮಾಡಿಲ್ಲ.
2022-23 ಸಾಲಿನ ಅರ್ಧ ವರ್ಷ ಕಳೆದರೂ ಡಬಲ್ ಇಂಜಿನ್ ಸರ್ಕಾರಕ್ಕೆ ಗ್ರಹಣ ಹಿಡಿದಂತೆ ಕಾಣುತ್ತಿದೆ. ಆರ್ಥಿಕ ವರ್ಷದ ಆರು ತಿಂಗಳಾದರೂ ರಾಜ್ಯದ ವಿವಿಧ ಕೇಂದ್ರ ಪುರಸ್ಕೃತ ಯೋಜನೆಯ ಪ್ರಗತಿ ಇನ್ನೂ ತೆವಳುತ್ತಲೇ ಸಾಗುತ್ತಿದೆ. ಅಂಕಿ ಅಂಶ ನೋಡಿದರೆ ಡಬಲ್ ಇಂಜಿನ್ ಸರ್ಕಾರ ವೇಗ ಕಳೆದುಕೊಂಡಿರುವುದು ಸ್ಪಷ್ಟವಾಗುತ್ತದೆ.
ಇದನ್ನೂ ಓದಿ:ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿಯೊಂದಿಗೆ ಮುನ್ನಡೆಯುತ್ತಿದೆ: ಮಂಗಳೂರಿನಲ್ಲಿ ಪ್ರಧಾನಿ ಮೋದಿ ಹೇಳಿಕೆ
ರಾಜ್ಯದಲ್ಲಿ ಅನೇಕ ಕೇಂದ್ರ ಪುರಸ್ಕೃತ ಯೋಜನೆಗಳು ಜಾರಿಯಲ್ಲಿವೆ. ಸುಮಾರು 20 ಇಲಾಖೆಗಳಲ್ಲಿ ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳು ಜಾರಿಯಲ್ಲಿವೆ. 2022-23 ಸಾಲಿನ ಮೊದಲಾರ್ಧ ವರ್ಷದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗೆ ಬಿಡುಗಡೆಯಾದ ಅನುದಾನ, ಪ್ರಗತಿ ಕಂಡರೆ ಡಬಲ್ ಇಂಜಿನ್ ಸರ್ಕಾರ ವಿಫಲವಾಗಿದೆಯಾ ಎಂಬ ಅನುಮಾನ ಮೂಡುತ್ತಿದೆ.
6 ತಿಂಗಳಲ್ಲಿ ಪ್ರಗತಿ ಕಂಡಿದ್ದು ಕೇವಲ ಶೇ. 31.40:2022-23ನೇ ಸಾಲಿನ ಮೊದಲಾರ್ಧ ವರ್ಷದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಕೇವಲ ಶೇ. 31.40 ಆಗಿದೆ. ರಾಜ್ಯದಲ್ಲಿ ಸುಮಾರು 20 ವಿವಿಧ ಇಲಾಖೆಗಳಡಿ ಕೇಂದ್ರ ಪುರಸ್ಕೃತ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದು, ಅದಕ್ಕಾಗಿ ಕೇಂದ್ರ ಸರ್ಕಾರ 20,441.59 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ.
ಆರು ತಿಂಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ 6,215.20 ಕೋಟಿ ರೂ. ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ 5,560.29 ಕೋಟಿ ರೂ.ಬಿಡುಗಡೆ ಮಾಡಿದೆ. ಆರಂಭಿಕ ಶಿಲ್ಕು ಸೇರಿ ಒಟ್ಟು 20,633.29 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ ಈವರೆಗೆ ವೆಚ್ಚ ಮಾಡಿರುವುದು 11,505.95 ಕೋಟಿ ರೂ. ಬಿಡುಗಡೆಯಾದ ಅನುದಾನದ ಮುಂದೆ ಶೇ. 55.76 ವೆಚ್ಚ ಮಾಡಲಾಗಿದೆ. ಇತ್ತ ಒಟ್ಟು ಹಂಚಿಕೆಯಾದ ಅನುದಾನದ ಮುಂದೆ ಶೇ. 31.40 ಮಾತ್ರ ಪ್ರಗತಿ ಕಾಣಲು ಸಾಧ್ಯವಾಗಿದೆ.