ಬೆಂಗಳೂರು: ಕಾರ್ಖಾನೆಗಳ (ತಿದ್ದುಪಡಿ) ವಿಧೇಯಕ 2023ಕ್ಕೆ ವಿಧಾನ ಪರಿಷತ್ ಇಂದು ಅನುಮೋದನೆ ನೀಡಿದೆ. ಸಚಿವ ಅಶ್ವತ್ಥ್ ನಾರಾಯಣ್ ವಿಧೇಯಕ ಮಂಡಿಸಿದರು. ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ವಿರೋಧ ವ್ಯಕ್ತಪಡಿಸಿದರು.
ವಿಧೇಯಕಕ್ಕೆ ಆಡಳಿತ ಪಕ್ಷದ ಸದಸ್ಯನಾಗಿ ನಾನು ವಿರೋಧಿಸುತ್ತೇನೆ. ಅಂತಾರಾಷ್ಟ್ರೀಯ ನಿಯಮದ ಪ್ರಕಾರ 8 ಗಂಟೆ ಕೆಲಸದ ಅವಧಿ ಎಂದು ಹೇಳಿದ್ದಾರೆ. ಕಾರ್ಮಿಕರು ಯಂತ್ರವಲ್ಲ. ಅವರನ್ನು ಹೇಗೆ ಬೇಕೋ ಹಾಗೆ ದುಡಿಸಿಕೊಳ್ಳುವಂತಿಲ್ಲ. ಗುಲಾಮಗಿರಿಯ ರೀತಿ 8 ರಿಂದ 12 ಗಂಟೆಯವರೆಗೂ ದುಡಿಸಿಕೊಳ್ಳುವುದು ಸರಿಯಲ್ಲ. ಕಾರ್ಮಿಕರ ಹಿತಕ್ಕಾಗಿ ಈ ಬಿಲ್ ಅಲ್ಲ. ಕಾರ್ಖಾನೆಯ ಹಿತಕ್ಕಾಗಿ ತರ್ತಿದ್ದೀರಾ. ಇದನ್ನು ನಾಗರಿಕ ಸರ್ಕಾರ ಒಪ್ಪದು. ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಸದನದಲ್ಲಿ ಇಲ್ಲ. ಅವರು ಚಾಲಕರಾಗಿದ್ದವರು. 12 ಗಂಟೆ ನಿರಂತರ ವಾಹನ ಚಲಾಯಿಸಿದ್ರೆ ಅಪಘಾತ ಆಗೊದಿಲ್ವೇ? ಎಂದರು.
ಐಟಿ, ಬಿಟಿ ಮಾಲೀಕರಿಗೋಸ್ಕರ ಈ ಕಾನೂನು ತರುವುದು ಸರಿಯಲ್ಲ. ಶಾಸಕರಾದ ನಾವೇ 8 ಗಂಟೆ ಸದನದಲ್ಲಿ ಕುಳಿತುಕೊಳ್ಳಲು ಆಗೋಲ್ಲ. ಕಲಾಪ ಮುಂದೂಡಿ ಎಂದು ಹೇಳಲ್ವಾ? ಈ ಕಾಯ್ದೆ ಜಾರಿಗೆ ತರುವ ಮೊದಲು ಕಾರ್ಮಿಕ ಸಂಘಗಳ ಜೊತೆ ಚರ್ಚೆ ಮಾಡಿದ್ದೀರಾ? ತಜ್ಞರ ಜೊತೆ ಚರ್ಚೆ ಮಾಡಿದ್ದೀರಾ? ಕಾರ್ಖಾನೆಯ ಮಾಲೀಕರು 12 ಗಂಟೆವರೆಗೂ ಮಾಡಲೇಬೇಕು ಎಂದ್ರೆ ಅದನ್ನು ವಿರೋಧಿಸಲು ಆಗುತ್ತಾ? ವಿರೋಧಿಸಿದ್ರೆ ಕೆಲಸದಿಂದ ತೆಗೆಯುವ ಎಚ್ಚರಿಕೆ ನೀಡಲ್ವಾ?. (ರೇಪ್ ಮಾಡ್ತೀನಿ ಎಂದ್ರೆ ಮಾಡಿಸಿಕೊಳ್ಳಲು ಒಪ್ಪಿಗೆ ನೀಡಿದಂತಾಗುತ್ತೆ). ಈ ರೀತಿಯ ಕಾಯ್ದೆ ಸರಿಯಲ್ಲ, ಈ ಬಗ್ಗೆ ಸಾಕಷ್ಟು ಚರ್ಚೆ ಆಗಬೇಕು. ಇದನ್ನು ವಾಪಸ್ ಪಡೆಯಬೇಕು. ಈ ಬಗ್ಗೆ ಸಾಕಷ್ಟು ಚರ್ಚೆ ಆಗಲಿ ಎಂದು ಹೇಳಿದರು.