ಬೆಂಗಳೂರು:ಪುಲಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಂಬಂಧಿ ನವೀನ್ ಫೇಸ್ಬುಕ್ನಲ್ಲಿ ಒಂದು ಸಮುದಾಯದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದು, ಇದರಿಂದ ಆಕ್ರೋಶಗೊಂಡ ಕೆಲವರು ಪ್ರತಿಭಟನೆ ನಡೆಸಿ, ಶಾಸಕರ ಮನೆ, ಕಚೇರಿಗೆ ಬೆಂಕಿ ಹಚ್ಚಿದ್ದಾರೆ.
ಕೆ.ಜೆ ಹಳ್ಳಿ ಹಾಗೂ ಡಿ.ಜೆ ಹಳ್ಳಿಯಲ್ಲಿ ಉದ್ರಿಕ್ತರು ಪ್ರತಿಭಟನೆ ನಡೆಸಿದ್ದರಿಂದ ಪೊಲೀಸರು ಹರಸಾಹಸಪಟ್ಟು ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯ ಬಂಧನ
ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ವ್ಯಕ್ತಿ ನವೀನ್ನನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.
ಪೊಲೀಸ್ ಫೈರಿಂಗ್ ವೇಳೆ ಓರ್ವ ಬಲಿ, ಮೂವರಿಗೆ ಗಾಯ; ಎರಡು ಏರಿಯಾದಲ್ಲಿ ಕರ್ಫ್ಯೂ ಜಾರಿ!
ನವೀನ್ ಬಂಧನ ಬಗ್ಗೆ ಗೊತ್ತಾದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇರುವ ಕಾರಣ ಅಧಿಕಾರಿಗಳು ಯಾವುದೇ ಮಾಹಿತಿ ಬಿಟ್ಟು ಕೊಟ್ಟಿಲ್ಲ ಎಂದೂ ತಿಳಿದು ಬಂದಿದೆ. ಪೋಸ್ಟ್ ಹಾಕಿರುವ ವ್ಯಕ್ತಿ ಪೊಲೀಸ್ ಠಾಣೆಯೊಳಗೆ ಇರಬಹುದು ಎಂಬ ಅನುಮಾನದ ಮೇರೆಗೆ ಠಾಣೆಯೊಳಗೆ ನುಗ್ಗಿರುವ ಉದ್ರಿಕ್ತರು ಪೊಲೀಸ್ ಗೇಟ್ ಹಾರಿ, ಬ್ಯಾರಿಕೇಡ್ ಮುರಿದಿರುವ ಘಟನೆಯೂ ಸಹ ನಡೆದಿದೆ.
ಉದ್ರಿಕ್ತ ಗುಂಪು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿರುವ ಕಾರಣ ಹಲವಾರು ವಾಹನ ಸುಟ್ಟು ಭಸ್ಮವಾಗಿವೆ. ಪ್ರತಿಭಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಶಾಸಕ ಜಮೀರ್ ಅಹ್ಮದ್ ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿ ಮಾತುಕತೆ ಸಹ ನಡೆಸಿದರು.