ಬೆಂಗಳೂರು: ನಕಲಿ ಅಂಕಪಟ್ಟಿ ಜಾಲ ರಾಜಧಾನಿಯಲ್ಲಿ ನಾಯಿಕೊಡೆಯಂತೆ ಬೆಳೆದು ಕೊಂಡಿದೆ. ಅಲ್ಲಲ್ಲಿ ರಾಜ್ಯ ಹಾಗೂ ಅಂತರ ರಾಜ್ಯದ ವಿಶ್ವ ವಿದ್ಯಾಲಯಗಳ ಅಂಕಪಟ್ಟಿಗಳು ಸಾರಾಸಗಟಾಗಿ ಸಿಗುತ್ತಿದೆ. ಈ ಹಿಂದೆ ಡಿಸೆಂಬರ್ನಲ್ಲಿ ಬೆಂಗಳೂರಿನ ಪೊಲೀಸ್ ಪಡೆ ವೆಂಕಟೇಶ್ವರ ಇನ್ಸಿಟಿಟ್ಯೂಟ್ ಸಂಸ್ಥೆಯ ಮೇಲೆ ದಾಳಿ ಮಾಡಿ ನಾಲ್ವರನ್ನು ಬಂಧಿಸಿದ್ದರು. ರಾಜ್ಯ, ಹೊರರಾಜ್ಯದ ವಿವಿಧ ಯೂನಿವರ್ಸಿಟಿಗಳ ವಿವಿಧ ಕೋರ್ಸುಗಳ ನಕಲಿ ಅಂಕಪಟ್ಟಿ ನೀಡುತ್ತಿದ್ದ ಐದು ಸಂಸ್ಥೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಎಜುಕೇಶನ್ ಕನ್ಸಲ್ಟೆನ್ಸಿ ಹೆಸರಿನಲ್ಲಿ ನಕಲಿ ಅಂಕಪಟ್ಟಿ ನೀಡುತ್ತಿದ್ದ ರಾಜಾಜಿ ನಗರದ ಕ್ವೆಸ್ಟ್ ಟೆಕ್ನಾಲಜೀಸ್, ಜೆ.ಪಿ.ನಗರದ ಸಿಸ್ಟಂ ಕ್ವೆಸ್ಟ್, ಭದ್ರಪ್ಪ ಲೇಔಟಿನ ಆರೋಹಿ ಇನ್ಸಿಟಿಟ್ಯೂಟ್, ದಾಸರಹಳ್ಳಿಯ ವಿಶ್ವಜ್ಯೋತಿ ಕಾಲೇಜ್ ಹಾಗೂ ವಿಜಯನಗರದ ಬೆನಕಾ ಕರೆಸ್ಪಾಡೆನ್ಸ್ ಕಾಲೇಜ್ ಮೇಲೆ ದಾಳಿ ನಡೆಸಲಾಗಿದ್ದು, ವಿಕಾಸ್ ಭಾಗವತ್ ಎಂಬಾತನನ್ನು ಬಂಧಿಸಲಾಗಿದೆ.
6,800ಕ್ಕೂ ಅಧಿಕ ನಕಲಿ ಅಂಕಪಟ್ಟಿಗಳು ವಶಕ್ಕೆ:ಈ ಹಿಂದೆ ನಕಲಿ ಅಂಕಪಟ್ಟಿ ಜಾಲದ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಆರೋಪಿಗಳ ಮಾಹಿತಿಯನ್ವಯ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಅದರನ್ವಯ ಐದು ನಕಲಿ ಅಂಕಪಟ್ಟಿ ನೀಡುತ್ತಿದ್ದ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದ್ದು, ಪರಿಶೀಲನೆ ಸಂದರ್ಭದಲ್ಲಿ ಆರೋಪಿತ ಸಂಸ್ಥೆಗಳ ಬಳಿ ಅಣ್ಣಾಮಲೈ ಯೂನಿವರ್ಸಿಟಿ, ಸಿಕ್ಕಿಂ ಯೂನಿವರ್ಸಿಟಿ, ಗೀತಂ ಯೂನಿವರ್ಸಿಟಿ, ಕುವೆಂಪು ಯೂನಿವರ್ಸಿಟಿ, ಜೈನ್ ವಿಹಾರ್ ಯೂನಿವರ್ಸಿಟಿ, ಮಂಗಳೂರು ಯೂನಿವರ್ಸಿಟಿ, ಬೆಂಗಳೂರು ಯೂನಿವರ್ಸಿಟಿ ಸೇರಿದಂತೆ ಹದಿನೈದು ವಿವಿಧ ಯೂನಿವರ್ಸಿಟಿಗಳ 6,846 ನಕಲಿ ಅಂಕಪಟ್ಟಿಗಳು ಪತ್ತೆಯಾಗಿವೆ. ಆಯಾ ಯೂನಿವರ್ಸಿಟಿಗಳಿಗೆ ಅಂಕಪಟ್ಟಿಗಳನ್ನ ಕಳುಹಿಸಿ ಅವುಗಳು ನಕಲಿ ಎಂಬ ಮಾಹಿತಿ ಪಡೆದಿರುವ ಸಿಸಿಬಿ ಪೊಲೀಸರು, ಆರೋಪಿ ಸಂಸ್ಥೆಗಳ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.