ಬೆಂಗಳೂರು: ತನ್ನ ಪತ್ನಿಯೊಂದಿಗೆ ವಿವಾಹೇತರ ಸಂಬಂಧವನ್ನಿಟ್ಟುಕೊಂಡಿದ್ದ ವ್ಯಕ್ತಿ, ಮತ್ತವನ ತಂದೆಯನ್ನು ಕೊಲೆ ಮಾಡಿದ್ದ ಪ್ರಕರಣದ ತಪ್ಪಿತಸ್ಥನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿ ಕೃಷ್ಣ(ಹೆಸರು ಬದಲಿಸಲಾಗಿದೆ) ಎಂಬಾತ ಅರ್ಜಿ ಸಲ್ಲಿಸಿದ್ದ. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ಮೇಲ್ಮನವಿದಾರರು ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಅಲ್ಲದೆ, ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಬದಲಾಗಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆದ ಕಾರಣ ಘಟನೆಗೂ ಅರ್ಜಿದಾರರಿಗೂ ಸಂಬಂಧವಿರುವುದು ಸಾಬೀತಾಗಿದೆ ಎಂದು ಪೀಠ ತಿಳಿಸಿದೆ. ಇದೇ ವೇಳೆ ಈ ಘಟನೆ ಆಕಸ್ಮಿಕವಾಗಿ ನಡೆದಿದ್ದು, ಉದ್ದೇಶಪೂರ್ವಕವಲ್ಲ ಎಂಬುದಾಗಿ ವಾದಿಸಿದ್ದ ಮೇಲ್ಮನವಿದಾರರ ವಾದವನ್ನು ನ್ಯಾಯಪೀಠ ತಳ್ಳಿಹಾಕಿದೆ.
ಆದರೆ, ಪ್ರಕರಣದಲ್ಲಿ ಗಾಯಗೊಂಡಿರುವ ವ್ಯಕ್ತಿಗಳಿಗೆ ನೆರವಾಗುವುದಕ್ಕೆ ಬದಲಾಗಿ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇದೇ ಸಂದರ್ಭದಲ್ಲಿ ಸಂತ್ರಸ್ತರ ಮೇಲೆ ತಕ್ಷಣ ಹಲ್ಲೆ ನಡೆಸಿದ್ದಾನೆ ಎಂಬುದಾಗಿ ವರದಿಯಾಗಿದೆ. ಅಷ್ಟೇ ಅಲ್ಲದೆ, ಅಪಘಾತಕ್ಕೆ ಒಳಗಾಗಿದ್ದ ವಾಹನವೂ ಆರೋಪಿ ಘಟನೆಗೂ ಒಂದು ತಿಂಗಳ ಹಿಂದೆ ಖರೀದಿ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಸಾಕ್ಷ್ಯಾಧಾರಗಳನ್ನು ವಿಚಾರಣಾ ನ್ಯಾಯಾಲಯ ಗಂಭೀರವಾಗಿ ಪರಿಶೀಲಿಸಿ ಶಿಕ್ಷೆ ವಿಧಿಸಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.