ಬೆಂಗಳೂರು :ಕೇಂದ್ರ ಸರ್ಕಾರ ನಾವು ಕೇಳಿದಷ್ಟು ಆಮ್ಲಜನಕದ ಕೊಡದದಿದ್ದರೂ ಕೋಟಾ ಹೆಚ್ಚಿಸಿರುವುದು ಸಂತಸದ ಸಂಗತಿ. ಮುಂದೆ ಮತ್ತಷ್ಟು ಹೆಚ್ಚಳಕ್ಕೆ ಮನವಿ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿರುವ ಅವರು, 2 ಲಕ್ಷ ವಯಲ್ ರೆಮ್ಡಿಸಿವಿರ್ ವಿದೇಶದಿಂದ ಖರೀದಿ ಮಾಡಲು ಕೇಂದ್ರದ ಅನುಮತಿ ಕೇಳಿದ್ದೇವೆ. ಅನುಮತಿ ಸಿಗುತ್ತಿದ್ದಂತೆ ಖರೀದಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದಿದ್ದಾರೆ.
ರಾಜ್ಯದಲ್ಲಿ ಆಮ್ಲಜನಕ,ರೆಮ್ಡಿಸಿವಿರ್ ಲಭ್ಯತೆ:ಸದ್ಯ ರಾಜ್ಯದಲ್ಲಿ ಪ್ರತಿ ನಿತ್ಯ 450 ಟನ್ ಆಮ್ಲಜನದ ಬೇಡಿಕೆ ಇದ್ದು, ಈಗ ಅದು 500 ಟನ್ಗೆ ಹೆಚ್ಚಾಗಿದೆ. ಇದು ಇನ್ನು ಹೆಚ್ಚಾಗುವ ಸಾಧ್ಯತೆ ಕಂಡು ಬಂದಿದೆ.
ರಾಜ್ಯದಲ್ಲಿ ವೈದ್ಯಕೀಯ ಗುಣಮಟ್ಟದ ಆಮ್ಲಜನಕದ ಉತ್ಪಾದನೆ ನಿತ್ಯ 878 ಟನ್ನಷ್ಟಿದ್ದರೂ ಅದರಲ್ಲಿ 300 ಟನ್ ಮಾತ್ರ ರಾಜ್ಯಕ್ಕೆ ಸರಬರಾಜು ಮಾಡಲಾಗುತ್ತಿದೆ. ಆದರೆ, ಸೋಂಕಿತರ ಸಂಖ್ಯೆ ಪ್ರತಿದಿನ 30 ಸಾವಿರ ಗಡಿ ತಲುಪಿದ್ದು, ಆತಂಕ ಮೂಡಿಸುತ್ತಿದೆ.
ಸೋಂಕಿತರ ಸಂಖ್ಯೆ ಹೆಚ್ಚಿದಂತೆ ಆಮ್ಲಜನಕದ ಬೇಡಿಕೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆತಂಕಕ್ಕೆ ಸಿಲುಕಿದ ರಾಜ್ಯಕ್ಕೆ ಸಂಜೀವಿನಿಯಂತೆ ಕೇಂದ್ರ ಸರ್ಕಾರ ಆಮ್ಲಜನಕ ಪೂರೈಕೆಯನ್ನು 300 ಟನ್ನಿಂದ 800 ಟನ್ಗೆ ಹೆಚ್ಚಿಸಿದೆ. ಇದು ರಾಜ್ಯಕ್ಕೆ ಸ್ವಲ್ಪ ಸಮಾಧಾನದ ವಿಷಯವಾಗಿದೆ.
ಮೇ 1ರಿಂದ 1500 ಟನ್ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದ್ದು, ಮನವಿ ಬೆನ್ನಲ್ಲೇ ತಕ್ಷಣದಿಂದಲೇ 500 ಟನ್ ಹೆಚ್ಚುವರಿಯಾಗಿ ಆಮ್ಲಜನಕ ಪೂರೈಕೆ ಮಾಡುತ್ತಿರುವುದು ಆಮ್ಲಜನಕದ ಕೊರತೆ ಪ್ರಮಾಣ ತಗ್ಗಿಸಲು ಸಹಕಾರಿಯಾಗಲಿದೆ.
ಸದ್ಯ ಬೆಂಗಳೂರಿನ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಐಸಿಯು, ವೆಂಟಿಲೇಟರ್ಗಳಲ್ಲಿ ಉಸಿರಾಟದ ತೊಂದರೆ ಇರುವ ಸೋಂಕಿತರಿಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದು, ಇರುವ ಆಮ್ಲಜನಕ ಸಾಲುತ್ತಿಲ್ಲ. ಆದರೆ ಈಗ ಬೆಂಗಳೂರಿನಲ್ಲಿ ಐಸಿಯು ಬೆಡ್ ಕೊರತೆ ನೀಗಿಸಲು ಸ್ಟೆಪ್ಡೌನ್ ಆಸ್ಪತ್ರೆಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು 2000 ಐಸಿಯು ಬೆಡ್ ವ್ಯವಸ್ಥೆ ಕಲ್ಪಿಸಲಿದೆ.
ಇನ್ನೆರಡು ವಾರದಲ್ಲಿ ಸ್ಟೆಪ್ಡೌನ್ ಆಸ್ಪತ್ರೆ ಸಿದ್ದಗೊಳ್ಳಲಿದ್ದು ಆಗ ಆಮ್ಲಜನಕ ಬೇಡಿಕೆ ಕನಿಷ್ಠ 500 ಟನ್ ಹೆಚ್ಚಾಗಲಿದೆ ಎನ್ನುವ ನಿರೀಕ್ಷೆ ಇದೆ. ಹಾಗಾಗಿ, ಸದ್ಯಕ್ಕೆ 800 ಟನ್ ಆಮ್ಲಜನಕ ಪೂರೈಕೆಯಿಂದ ನಿರಾಳರಾದರೂ ಇನ್ನೆರಡು ವಾರದಲ್ಲಿ ಆಮ್ಲಜನಕದ ಪ್ರಮಾಣ 1300 ಟನ್ಗಳಷ್ಟಾದರೂ ಬೇಕಾಗಲಿದೆ.
ಸರ್ಕಾರ ಅಗತ್ಯ ಆಮ್ಲಜನಕ ಉತ್ಪಾದನೆ ಮತ್ತು ರಾಜ್ಯದ ಕೋಟಾ ಹೆಚ್ಚಿಸುವಂತೆ ಮನವಿ ಮಾಡುತ್ತಿದೆ.ಇನ್ನೊಂದು ಕಡೆ ಕೋವಿಡ್ ಸೋಂಕಿತರಿಗೆ ನೀಡುವ ರೆಮ್ಡಿಸಿವಿರ್ ವಿಚಾರದಲ್ಲಿಯೂ ರಾಜ್ಯ ಸರ್ಕಾರ ಕೇಂದ್ರದ ಕಡೆ ಮುಖ ಮಾಡಿ ಕುಳಿತಿದೆ.
ಸದ್ಯ 55 ಸಾವಿರ ವಯಲ್ಸ್ ರೆಮ್ಡಿಸಿವಿರ್ ಔಷಧ ಪೂರೈಕೆಯಾಗುತ್ತಿದ್ದು,ನಿತ್ಯದ ಬೇಡಿಕೆ 70-80 ಸಾವಿರ ವಯಲ್ಸ್ ದಾಟಿದೆ. ಔಷಧ ಲಭ್ಯತೆ ಕೊರತೆಯಿಂದಾಗಿ ಸೋಂಕಿತರಿಗೆ ರೆಮ್ಡಿಸಿವಿರ್ ಡೋಸೇಜ್ಗಳ ನೀಡಿಕೆಯಲ್ಲಿ ವಿಳಂಬವಾಗುತ್ತಿದೆ.
ಹಾಗಾಗಿ, ರಾಜ್ಯ 2 ಲಕ್ಷ ವಯಲಗ್ಸ್ಗೆ ಬೇಡಿಕೆ ಇರಿಸಿದ್ದು ಇದಕ್ಕೆ ಸ್ಪಂದಿಸಿ ಸದ್ಯ ರಾಜ್ಯದಲ್ಲಿ ರೆಮ್ಡಿಸಿವಿರ್ ಔಷಧ ಕೊರತೆ ಕಂಡು ಬಂದಿರುವ ಹಿನ್ನೆಲೆ ಪೂರೈಕೆಯನ್ನು 55 ಸಾವಿರದಿಂದ 1.22 ಲಕ್ಷ ವಯಲ್ಸ್ಗೆ ಹೆಚ್ಚಿಸಲಾಗಿದೆ.
ಇದರಿಂದ ರಾಜ್ಯದಲ್ಲಿನ ಕೋವಿಡ್ ಸೋಂಕಿತರು ಔಷಧ ಕೊರತೆ ಸಮಸ್ಯೆಯಿಂದ ಸದ್ಯದ ಮಟ್ಟಿಗೆ ನಿರಾಳರಾಗಬಹುದಾಗಿದೆ. ಮೇ ಎರಡನೇ ವಾರದಲ್ಲಿ ಕೊರೊನಾ ಸ್ಪೋಟ ತೀವ್ರ ಸ್ವರೂಪದ ಗರಿಷ್ಠ ಮಟ್ಟ ತಲುಪಿ ನಂತರ ಸಂಖ್ಯೆಯಲ್ಲಿ ಇಳಿಕೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಈ ಸನ್ನಿವೇಶ ಎದುರಿಸಲು ಮತ್ತಷ್ಟು ಹೆಚ್ಚಿನ ಪ್ರಮಾಣದ ಆಮ್ಲಜನಕ ಮತ್ತು ರೆಮ್ಡಿಸಿವಿರ್ ಔಷಧ ಅಗತ್ಯವಿದೆ.