ಬೆಂಗಳೂರು: ಕಾರಿನಲ್ಲಿ ಸಿಗರೇಟ್ ಸೇದುತ್ತಾ ಹೋಗುತ್ತಿದ್ದವನನ್ನು ಅಡ್ಡಗಟ್ಟಿ ಬೆದರಿಸಿ ಹಣ, ಚಿನ್ನಾಭರಣ ಸುಲಿಗೆ ಮಾಡಿರುವ ಘಟನೆ ಫೆ.22ರ ಸಂಜೆ ಬೆನ್ನಿಗಾನಹಳ್ಳಿ ಅಂಡರ್ ಪಾಸ್ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಾರಿನಲ್ಲಿ ಸಿಗರೇಟ್ ಸೇದುತ್ತಾ ಆಫೀಸಿಗೆ ತೆರಳುತ್ತಿದ್ದ ಧನಂಜಯ್ ನಾಯರ್ ಎಂಬುವವರನ್ನ ಬೈಕಿನಲ್ಲಿ ಬಂದು ಅಡ್ಡಗಟ್ಟಿದ್ದ ಅಪರಿಚಿತನೊಬ್ಬ ನೀನು ಕಾರಿನಲ್ಲಿ ಸಿಗರೇಟ್ ಸೇದಿರುವುದರಿಂದ ಜೈಲಿಗೆ ಹಾಕುವುದಾಗಿ ಹಾಗೂ ತನಗೆ ಪೊಲೀಸರು ಪರಿಚಯವಿದ್ದಾರೆ. ನನ್ನ ಬಳಿ ವೆಪನ್ ಇದೆ ಎಂದು ಬೆದರಿಸಿದ್ದಾನೆ. ಮೊಬೈಲ್ ಫೋನ್, ವಾಲೆಟ್ ಕಸಿದುಕೊಂಡು ನಂತರ ಎಟಿಎಂ ಬಳಿ ಕರೆದೊಯ್ದು, 50 ಸಾವಿರ ನಗದು ಹಾಗೂ 45 ಸಾವಿರದಷ್ಟು ಹಣವನ್ನು ಡೆಬಿಟ್ ಕಾರ್ಡಿನಿಂದ ವಿತ್ ಡ್ರಾ ಮಾಡಿಸಿಕೊಂಡು, 28-30 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನ ಪಡೆದುಕೊಂಡು ಪರಾರಿಯಾಗಿದ್ದಾನೆ ಎಂದು ನಾಯರ್ ದೂರು ನೀಡಿದ್ದಾರೆ.
ಕೆಲ ದಿನಗಳ ಬಳಿಕ ಧನಂಜಯ್ ಸುಲಿಗೆ ಬಗ್ಗೆ ಗೆಳೆಯರ ಬಳಿ ಹಂಚಿಕೊಂಡಿದ್ದು, ಅವರ ಸೂಚನೆಯ ಮೇರೆಗೆ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ರಾಮಮೂರ್ತಿ ನಗರ ಠಾಣಾ ಪೊಲೀಸರು, ಆರೋಪಿಗಾಗಿ ಹುಟುಕಾಟ ನಡೆಸುತ್ತಿದ್ದಾರೆ.
ಆತ್ಮಹತ್ಯೆಗೆ ಶರಣಾದ ವಿವಾಹಿತೆ: ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಿನ್ನೆ ಸಂಜೆ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯ ಲಕ್ಷ್ಮಣಪುರಿಯಲ್ಲಿ ನಡೆದಿದ್ದು ಆಕೆಯ ಪತಿ ವಿಘ್ನೇಶ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಆರೋಪ ಕೇಳಿ ಬಂದಿದೆ. ಸೌಂದರ್ಯ ಆತ್ಮಹತ್ಯೆಗೆ ಶರಣಾದ ಮಹಿಳೆ.
ನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ದ ಸೌಂದರ್ಯ, ವಿಘ್ನೇಶ್ ದಂಪತಿಗೆ ಮಕ್ಕಳಿರಲಿಲ್ಲ. ಗಂಡ ವಿಘ್ನೇಶ್, ಆತನ ತಾಯಿ ಇರ್ಚಮ್ಮ, ಸಂಬಂಧಿಕರಾದ ವಿಮಲಾ, ರೇವತಿ, ಶಿವು ಎಂಬುವರು ಸೌಂದರ್ಯಳಿಗೆ ಕಿರುಕುಳ ನೀಡುತ್ತಿದ್ದರಂತೆ. ಆಗಾಗ ವರದಕ್ಷಿಣೆ ಕೊಡುವಂತೆ ಕಿರುಕುಳ ನೀಡುತ್ತಿದ್ದ ವಿಘ್ನೇಶ್ ಮನೆಯವರು ನಿನ್ನೆ ಇದೇ ರೀತಿ ಗಲಾಟೆ ಮಾಡಿ ಸೌಂದರ್ಯಗೆ ಥಳಿಸಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಆರೋಪಿಗಳನ್ನ ಬಂಧಿಸುವವರೆಗೂ ಮೃತದೇಹ ಕೊಂಡೊಯ್ಯುವುದಿಲ್ಲ ಎಂದು ಮೃತಳ ಕುಟುಂಬಸ್ಥರು ಕೆಲಕಾಲ ಶೇಷಾದ್ರಿಪುರಂ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಘಟನೆ ಸಂಬಂಧ ಶೇಶಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಆನ್ಲೈನ್ ಗೇಮ್ ಗೀಳು.. ಅಧಿಕಾರಿಯಿಂದ ಬ್ಯಾಂಕ್ಗೆ 2 ಕೋಟಿಗೂ ಅಧಿಕ ವಂಚನೆ
ಅತ್ತೆಯನ್ನೇ ಕೂಲೆ ಮಾಡಿದ ಅಳಿಯ:ಚಾಕುವಿನಿಂದ ಇರಿದು ಅಳಿಯನೇ ತನ್ನ ಅತ್ತೆಯನ್ನು ಕೊಲೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ಕೆಂಗೇರಿ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯ ಬೃಂದಾವನ ಲೇಔಟ್ನಲ್ಲಿ ನಡೆದಿದೆ. ಏಳರಸಿ (48) ತನ್ನ ಅಳಿಯ ದಿವಾಕರ್ ನಿಂದ ಕೊಲೆಯಾದ ಮಹಿಳೆಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಲಕ್ಷ್ಮಣ್ ನಿಂಬರಗಿ, ಮೃತ ಏಳರಸಿಯ ಮೊದಲನೇ ಮಗಳು ತಮಿಳರಸಿಯ ಜೊತೆಗೆ ದಿವಾಕರ್ ವಿವಾಹವಾಗಿದ್ದು, ಕೆಜಿಎಫ್ ಬಳಿ ವಾಸವಿದ್ದನು. ಮದುವೆಯಾಗಿ 12 ವರ್ಷಗಳಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಈ ಹಿಂದೆಯೂ ಸಾಕಷ್ಟು ಬಾರಿ ಹಲವು ಕಾರಣಗಳಿಗೆ ಇಬ್ಬರ ಮಧ್ಯೆ ಗಲಾಟೆಗಳಾಗಿ, ಕೋರ್ಟ್ವರೆಗೂ ಹೋಗಿತ್ತು. ನಂತರ ಕಾಂಪ್ರಮೈಸ್ ಆಗಿ ಇಬ್ಬರು ಜೊತೆಯಾಗಿಯೇ ಜೀವನ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.