ಬೆಂಗಳೂರು: ಕೊರೊನಾ ಲಾಕ್‌ಡೌನ್ ಹಿನ್ನೆಲೆ ಆಸ್ತಿ ತೆರಿಗೆ ಕಟ್ಟಲು ಸಾಧ್ಯವಾಗದ ಕಾರಣ ನಗರ ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆ ಮೇಲೆ ನೀಡುವ ಶೇ. 5ರಷ್ಟು ರಿಯಾಯಿತಿ ಕಾಲಾವಧಿಯನ್ನು ಮೇ. 31ರವರೆಗೆ ವಿಸ್ತರಿಸಲು ಕ್ರಮ ವಹಿಸುವಂತೆ ಸರ್ಕಾರ ಸೂಚನೆ ನೀಡಿದೆ.
ಗುಡ್ನ್ಯೂಸ್: ಆಸ್ತಿ ತೆರಿಗೆ ಮೇಲಿನ ರಿಯಾಯಿತಿ ಕಾಲಾವಧಿ ವಿಸ್ತರಣೆ
ಏಪ್ರಿಲ್ ತಿಂಗಳ ಆಸ್ತಿ ತೆರಿಗೆ ರಿಯಾಯಿತಿಯನ್ನು ಮೇ. 31ರವರೆಗೆ ವಿಸ್ತರಿಸಲಾಗಿದೆ.
ಪೌರಸಭೆಗಳ ಕಾಯ್ದೆ ಅನ್ವಯ ಆರ್ಥಿಕ ವರ್ಷ ಆರಂಭ ಅಂದರೆ ಏಪ್ರಿಲ್ನಲ್ಲಿ ಸಾರ್ವಜನಿಕರು ನಗರ ಸ್ಥಳೀಯ ಸಂಸ್ಥೆಗಳಿಗೆ ಆಸ್ತಿ ತೆರಿಗೆ ಭರಿಸಬೇಕಾಗುತ್ತದೆ. ಏಪ್ರಿಲ್ ತಿಂಗಳೊಳಗೆ ಆಸ್ತಿ ತೆರಿಗೆ ಪಾವತಿ ಮಾಡುವ ಸಾರ್ವಜನಿಕರಿಗೆ ಶೇ. 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಈ ಹಿನ್ನೆಲೆ ಜನರು ಮನೆ ಹೊರಗೆ ಬಂದು ತೆರಿಗೆ ಸಂದಾಯ ಮಾಡಲು ಜನಸಂದಣಿ ಸೇರುವ ಸಾಧ್ಯತೆ ಇದೆ. ಕೊರೊನಾ ಹಿನ್ನೆಲೆ ಇದು ಸಾಧ್ಯವಿಲ್ಲದ ಕಾರಣ ಆಸ್ತಿ ತೆರಿಗೆ ಮೇಲಿನ ಶೇ 5ರಷ್ಟು ರಿಯಾಯಿತಿ ಅವಧಿಯನ್ನು ಮೇ. 31ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆ 2020-21ನೇ ಸಾಲಿಗೆ ಮಾತ್ರ ಅನ್ವಯಿಸುವಂತೆ ಆಸ್ತಿ ತೆರಿಗೆ ಮೇಲಿನ ಶೇ 5ರಷ್ಟು ರಿಯಾಯಿತಿ ಸೌಲಭ್ಯದ ಕಾಲಾವಧಿಯನ್ನು ಮೇ. 31ರವರೆಗೆ ವಿಸ್ತರಿಸಿ ಸಾರ್ವಜನಿಕರಿಗೆ ಆಸ್ತಿ ತೆರಿಗೆ ಪಾವತಿಸಲು ಕ್ರಮ ವಹಿಸುವಂತೆ ಪೌರಾಡಳಿತ ಇಲಾಖೆ ಸೂಚನೆ ನೀಡಿದೆ.